ADVERTISEMENT

ಎಸಿಬಿ ದಾಳಿ ಪ್ರಕರಣ: 17 ಆರೋಪಿಗಳಿಗೆ ಜಾಮೀನು

ರಾಜಾಜಿನಗರ ಆರ್‌ಟಿಒ ಕಚೇರಿ ಮೇಲೆ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:49 IST
Last Updated 2 ಮಾರ್ಚ್ 2019, 19:49 IST

ಬೆಂಗಳೂರು: ರಾಜಾಜಿನಗರದ ಆರ್‌ಟಿಒ ಕಚೇರಿ ಹಾಗೂ ಅಕ್ಕಪಕ್ಕದ ಅಂಗಡಿಗಳ ಮೇಲೆ ಈಚೆಗೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದ 17 ಆರೋಪಿಗಳಿಗೆ ಶನಿವಾರ ಷರತ್ತುಬದ್ಧ ಜಾಮೀನು ದೊರೆತಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಗರದ 23ನೇ ಸಿಟಿ ಸಿವಿಲ್‌ ಮತ್ತು ಹೆಚ್ಚುವರಿ ಕೋರ್ಟ್‌, ಪ್ರತಿ ಎರಡನೇ ಸೋಮವಾರ ತನಿಖಾಧಿಕಾರಿ ಮುಂದೆ ಹಾಜರಾಗಬೇಕು, ಮತ್ತೆ ಈ ಅಪರಾಧಗಳನ್ನು ಮಾಡಬಾರದು, ಸಾಕ್ಷ್ಯ ನಾಶಪಡಿಸಬಾರದು, ಸಾಕ್ಷಿಗಳನ್ನು ಬೆದರಿಸಬಾರದು ಎಂದು ಷರತ್ತು ಹಾಕಿದೆ.

ಬುಧವಾರ ಈ ದಾಳಿ ನಡೆದಿತ್ತು. ಗುರುವಾರ ಎಲ್ಲರನ್ನು ಬಂಧಿಸಲಾಗಿತ್ತು.ದಾಳಿ ವೇಳೆ ಆರ್‌ಟಿಒ ಕಚೇರಿಯಿಂದ ಲೆಕ್ಕಕ್ಕೆ ಸಿಗದ ₹ 8.72 ಲಕ್ಷ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ, ಸಾರ್ವಜನಿಕರಿಂದ ಅಧಿಕೃತವಾಗಿ ₹ 7.31 ಲಕ್ಷ ಸಂಗ್ರಹಿಸಲಾಗಿತ್ತು.

ADVERTISEMENT

14 ಅಂಗಡಿಗಳಲ್ಲಿ 8 ಅಧಿಕೃತ ಸೀಲುಗಳು, 1026 ಆರ್‌.ಸಿ. ಸ್ಮಾರ್ಟ್‌ ಕಾರ್ಡ್‌, 1523 ಡಿ.ಎಲ್‌. ಸ್ಮಾರ್ಟ್‌ ಕಾರ್ಡ್‌, 18 ಎಫ್‌.ಸಿ. ಕಾರ್ಡ್‌ ವಶಪಡಿಸಿಕೊಳ್ಳಲಾಗಿತ್ತು.

‘ಆರ್‌ಟಿಒ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರವಿಲ್ಲದೆ ಅಂಗಡಿಗಳಿಗೆ ಸೀಲುಗಳು ಹಾಗೂ ಸ್ಮಾರ್ಟ್‌ ಕಾರ್ಡ್‌ಗಳು ಹೇಗೆ ಹೋಗಲು ಸಾಧ್ಯ?’ ಎಂಬ ಬಗ್ಗೆಯೂ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.