ADVERTISEMENT

ಭ್ರಷ್ಟರ ಬೇಟೆ: ಮಧ್ಯವರ್ತಿ ಮನೆಯಲ್ಲೇ ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 7:06 IST
Last Updated 22 ಮಾರ್ಚ್ 2022, 7:06 IST
ಆರ್‌.ಟಿ. ನಗರದ ಮನೋರಾಯನಪಾಳ್ಯದ ಮೋಹನ್‌ ಅವರ ಮನೆಯಲ್ಲಿ 4.960 ಕೆ.ಜಿ ಚಿನ್ನ, 15.02 ಕೆ.ಜಿ ಬೆಳ್ಳಿ, 61.9 ಗ್ರಾಂ ವಜ್ರ ಪತ್ತೆಯಾಗಿದೆ.
ಆರ್‌.ಟಿ. ನಗರದ ಮನೋರಾಯನಪಾಳ್ಯದ ಮೋಹನ್‌ ಅವರ ಮನೆಯಲ್ಲಿ 4.960 ಕೆ.ಜಿ ಚಿನ್ನ, 15.02 ಕೆ.ಜಿ ಬೆಳ್ಳಿ, 61.9 ಗ್ರಾಂ ವಜ್ರ ಪತ್ತೆಯಾಗಿದೆ.   

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಆರೋಪದ ಮೇಲೆ ಒಂಬತ್ತು ಮಂದಿ ಖಾಸಗಿ ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶೋಧ ನಡೆಸುತ್ತಿದೆ.

ಬಿಡಿಎ ಕಚೇರಿಗಳಲ್ಲಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ಬಿ.ಎನ್‌. ರಘು, ಆರ್‌.ಟಿ. ನಗರದ ಮನೋರಾಯನಪಾಳ್ಯದ ಮೋಹನ್‌, ದೊಮ್ಮಲೂರಿನ ಮನೋಜ್‌, ಮಲ್ಲತ್ತಹಳ್ಳಿಯ ಕೆನಗುಂಟೆ ಮುನಿರತ್ನ ಅಲಿಯಾಸ್‌ ರತ್ನವೇಲು, ರಾಜರಾಜೇಶ್ವರಿನಗರದ ತೇಜು ಅಲಿಯಾಸ್‌ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ವೃತ್ತದ ಅಶ್ವತ್ಥ್‌, ಚಾಮುಂಡೇಶ್ವರಿ ನಗರ ಬಿಡಿಎ ಬಡಾವಣೆಯ ರಾಮ ಮತ್ತು ಲಕ್ಷ್ಮಣ ಹಾಗೂ ಮುದ್ದಿನಪಾಳ್ಯದ ಚಿಕ್ಕಹನುಮಯ್ಯ ಮನೆಗಳ ಮೇಲೆ ದಾಳಿಮಾಡಿರುವ ಎಸಿಬಿ ಅಧಿಕಾರಿಗಳುಶೋಧ ನಡೆಸುತ್ತಿದ್ದಾರೆ.

ಸಿಕ್ಕಿದ್ದೇನು?: ದಾಳಿ ವೇಳೆಆರ್‌.ಟಿ. ನಗರದ ಮನೋರಾಯನಪಾಳ್ಯದ ಮೋಹನ್‌ ಅವರ ಮನೆಯಲ್ಲಿ 4.960 ಕೆ.ಜಿ ಚಿನ್ನ, 15.02 ಕೆ.ಜಿ ಬೆಳ್ಳಿ, 61.9 ಗ್ರಾಂ ವಜ್ರ ಪತ್ತೆಯಾಗಿದೆ.

ADVERTISEMENT

ಈ ಹಿಂದೆ ಬಿಡಿಎ ಕಚೇರಿಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಹಲವು ಅಕ್ರಮಗಳನ್ನು ಪತ್ತೆಮಾಡಿದ್ದರು. ಆ ಪ್ರಕರಣದ ತನಿಖೆಯಲ್ಲಿ ಖಾಸಗಿ ಮಧ್ಯವರ್ತಿಗಳ ಪಾತ್ರದ ಕುರಿತು ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿರುವ ತನಿಖಾ ಸಂಸ್ಥೆ, ಕಾರ್ಯಾಚರಣೆ ನಡೆಸುತ್ತಿದೆ.

ಎಸಿಬಿ ಕೇಂದ್ರ ಸ್ಥಾನದ ಎಸ್‌ಪಿ ಉಮಾ ಪ್ರಶಾಂತ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ದಾಖಲೆಗಳು, ಆಸ್ತಿ ವಿವರಗಳು, ಬ್ಯಾಂಕ್‌ ವಹಿವಾಟು, ಅಧಿಕಾರಿಗಳ ಜತೆಗಿನ ಒಡನಾಟಕ್ಕೆ ಸಂಬಂಧಿಸಿದ ವಿವರಗಳು, ಬಿಡಿಎ ಕಚೇರಿಗಳಿಗೆ ಸಂಬಂಧಿಸಿದ ಕಡತಗಳಿಗಾಗಿ ಆರೋಪಿತರ ಮನೆಗಳಲ್ಲಿ ಶೋಧ ನಡೆಯುತ್ತಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.