ADVERTISEMENT

ಎಎಸ್‌ಐ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 17:15 IST
Last Updated 15 ಜೂನ್ 2021, 17:15 IST

ಬೆಂಗಳೂರು: ಉದ್ಯಮಿಯೊಬ್ಬರನ್ನು ಬೆದರಿಸಿ ₹ 5 ಲಕ್ಷ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಕೊಡಿಗೆಹಳ್ಳಿ ಠಾಣೆಯ ಎಎಸ್‌ಐ ದಯಾನಂದಸ್ವಾಮಿ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ದಾಳಿಮಾಡಿ, ಶೋಧ ನಡೆಸಿದ್ದಾರೆ.

ಯಲಹಂಕ ಉಪನಗರ ನಿವಾಸಿ ಭರತ್‌ ಶೆಟ್ಟಿ ಎಂಬ ಉದ್ಯಮಿ ನೀಡಿದ್ದ ದೂರು ಎಎಸ್‌ಐ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಯಲಹಂಕ ಉಪ ನಗರದಲ್ಲಿರುವ ದಯಾನಂದಸ್ವಾಮಿ ಮನೆ ಮೇಲೆ ದಾಳಿಮಾಡಿದ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಭರತ್‌ ಶೆಟ್ಟಿ ವಿರುದ್ಧ ವಂಚನೆ ಹಾಗೂ ಹಲ್ಲೆ ಆರೋಪದಡಿ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಉದ್ಯಮಿಯ ವಿರುದ್ಧದ ಆರೋಪ ಸುಳ್ಳು ಎಂಬುದು ತನಿಖೆ ವೇಳೆ ದೃಢಪಟ್ಟಿತ್ತು. ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಲು ಎಎಸ್‌ಐ ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ₹ 5 ಲಕ್ಷವನ್ನು ಮುಂಗಡವಾಗಿ ಪಡೆದಿದ್ದರು ಎಂದು ಉದ್ಯಮಿ ಎಸಿಬಿಗೆ ದೂರು ನೀಡಿದ್ದಾರೆ.

ADVERTISEMENT

ಈ ಮೊದಲು ಉದ್ಯಮಿ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಈಶಾನ್ಯ ವಲಯದ ಡಿಸಿಪಿ ಸಿ.ಕೆ. ಬಾಬಾ ಅವರಿಗೆ ದೂರು ನೀಡಿದ್ದರು. ಡಿಸಿಪಿ ನಡೆಸಿದ ಆಂತರಿಕ ತನಿಖೆಯಲ್ಲಿ, ಎಎಸ್‌ಐ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿದೆ ಎಂಬುದು ಕಂಡುಬಂದಿತ್ತು. ಅವರ ವರದಿ ಆಧರಿಸಿ ದಯಾನಂದ ಸ್ವಾಮಿ ಅವರನ್ನು ಅಮಾನತು ಮಾಡಲಾಗಿತ್ತು.

’ಆರೋಪಿ ಎಎಸ್‌ಐ ತಲೆಮರೆಸಿಕೊಂಡಿದ್ದಾರೆ. ಅವರ ಮನೆಯಲ್ಲಿ ಶೋಧ ನಡೆಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.