ADVERTISEMENT

ಟೆಂಡರ್‌ ಅಕ್ರಮ, ದಾಖಲೆಗಳ ವಶ: ಎಸಿಬಿಯಿಂದ ಮೂರನೇ ದಿನವೂ ಶೋಧ

₹ 1,050 ಕೋಟಿ ಮೊತ್ತದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 22:41 IST
Last Updated 2 ಮಾರ್ಚ್ 2022, 22:41 IST
   

ಬೆಂಗಳೂರು: ಬಿಬಿಎಂಪಿ ಕಚೇರಿಗಳಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ
ದಳ (ಎಸಿಬಿ), ರಾಜಕಾಲುವೆ ವಿಭಾಗದಲ್ಲಿ 2017ರಿಂದ ಈವರೆಗೆ ನಡೆದಿರುವ ₹ 1,050 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ ದಾಖಲೆಗಳನ್ನು ಬುಧವಾರ ವಶಕ್ಕೆ ಪಡೆದಿದೆ.

ಶನಿವಾರ ಮತ್ತು ಸೋಮವಾರ ಬಿಬಿಎಂಪಿ ಕಚೇರಿಗಳಲ್ಲಿ ಎಸಿಬಿ ಶೋಧನಡೆಸಿತ್ತು. ಬುಧವಾರವೂ ಕಾರ್ಯಾಚರಣೆ ಮುಂದುವರಿಸಿದ ತನಿಖಾ ಸಂಸ್ಥೆಯ 35 ತಂಡಗಳು 33 ಸ್ಥಳಗಳಲ್ಲಿ ಶೋಧ ನಡೆಸಿದವು. ರಾಜಕಾಲುವೆಗಳ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣದಿಂದ ಟೆಂಡರ್‌ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ನಕಲಿ ದಾಖಲೆ ಸೃಷ್ಟಿಸಿ ಬಿಲ್‌ ಪಾವತಿಸಿರುವುದು ಪತ್ತೆಯಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿದ ಲೆಕ್ಕಪರಿಶೋಧನಾ ವರದಿ, ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೆಲವೇ ಗುತ್ತಿಗೆದಾರರಿಗೆ ಕಾಮಗಾರಿ ನೀಡಿರುವುದು ಕಂಡುಬಂದಿದೆ. ಈ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ₹ 1.18 ಲಕ್ಷ ನಗದು ಕೂಡ ಪತ್ತೆಯಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನೂರಾರು ಕೋಟಿ ನಷ್ಟ: ಜಾಹೀರಾತು ವಿಭಾಗದಲ್ಲಿ ₹ 300 ಕೋಟಿಗೂ ಹೆಚ್ಚು ತೆರಿಗೆ ವಸೂಲಿ ಮಾಡದೇ ನಷ್ಟ ಉಂಟುಮಾಡಿರುವುದು ಪತ್ತೆಯಾಗಿದೆ. ₹ 267 ಕೋಟಿ ಜಾಹೀರಾತು ತೆರಿಗೆ ಹಲವು ವರ್ಷಗಳಿಂದ ಬಾಕಿ ಇದೆ. ಪ್ರಯಾಣಿಕರ ತಂಗುದಾಣ ಮತ್ತು ಸ್ಕೈವಾಕ್‌ಗಳಲ್ಲಿ ಜಾಹೀರಾತು ಅಳವಡಿಸಿರುವವರಿಂದ ₹ 27 ಕೋಟಿ ಬಾಕಿ ಇದೆ. ಹೊಸದಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣಗಳಲ್ಲಿ ಅಳವಡಿಸಿರುವ ಜಾಹೀರಾತುಗಳಿಂದಲೂ ₹ 6 ಕೋಟಿ ಶುಲ್ಕ ಬಾಕಿ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಂದಾಯ ವಿಭಾಗದಲ್ಲಿ ಭಾರಿ ಪ್ರಮಾಣದ ಅಕ್ರಮಗಳು ಪತ್ತೆಯಾಗಿವೆ. ತೆರಿಗೆ ನಿಗದಿಯಲ್ಲಿ ಮೋಸ ಮಾಡಿ ₹ 217 ಕೋಟಿ ನಷ್ಟ ಉಂಟುಮಾಡಿರುವ ಆರೋಪದ ಮೇಲೆ ಏಳು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ. ವಾಣಿಜ್ಯ ಉದ್ದೇಶದ ಸ್ವತ್ತುಗಳನ್ನು ವಸತಿ ಉದ್ದೇಶದ ಸ್ವತ್ತುಗಳೆಂದು ನಮೂದಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಸ್ತಿಗಳ ವಿಸ್ತೀರ್ಣ ಕಡಿಮೆ ನಮೂದಿಸಿರುವುದು, ಪೆಂಟ್‌ ಹೌಸ್‌ಗಳಿಗೆ ತೆರಿಗೆ ವಿಧಿಸದೇ ಇರುವುದು ಮತ್ತು ಆಸ್ತಿ ತೆರಿಗೆ ನಿಗದಿ ಪಡಿಸುವಾಗ ವಲಯಗಳನ್ನುತಪ್ಪಾಗಿ ನಮೂದಿಸಿ ಅಕ್ರಮ ಎಸಗಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.‌

ನಗರ ಯೋಜನಾ ವಿಭಾಗದ ಅಧಿಕಾರಿಗಳು ಕೆರೆ ಮತ್ತು ನಿರ್ಬಂಧಿತ ವಲಯಗಳಲ್ಲಿ ಅಕ್ರಮವಾಗಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಂಡುಬಂದಿದೆ. ಸ್ಥಳ ಪರಿಶೀಲಿಸದೇ ನಕ್ಷೆಗೆ ಅನುಮೋದನೆ ನೀಡಿರುವುದು ಪತ್ತೆಯಾಗಿದೆ. ನಿರ್ಮಾಣ ಹಂತದ ಕಟ್ಟಡಗಳಿಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಿರುವ ದಾಖಲೆಗಳು ಲಭಿಸಿವೆ ಎಂದು ಮಾಹಿತಿ ನೀಡಿದೆ.

ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ಆರಕ್ಕೂ ಹೆಚ್ಚು ಅಂತಸ್ತು ನಿರ್ಮಿಸಲಾಗಿದೆ. ಆದರೂ ನಗರ ಯೋಜನಾ ವಿಭಾಗವು ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. 10ಕ್ಕಿಂತ ಹೆಚ್ಚಿನ ಮಹಡಿಗಳ ಎಲ್ಲ ಕಟ್ಟಡಗಳು ಹಾಗೂ ಎರಡು ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಎಲ್ಲ ಕಟ್ಟಡಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ. ಅಕ್ರಮ ನಿರ್ಮಾಣಗಳು ಪತ್ತೆಯಾದರೂ ಬಿಬಿಎಂ‍ಪಿ ವಿಚಕ್ಷಣಾ ದಳ ಕ್ರಮ ಜರುಗಿಸಿಲ್ಲ ಎಂದು ಎಸಿಬಿ ಹೇಳಿದೆ.

ಟಿಡಿಆರ್‌ನಲ್ಲಿ ಮತ್ತಷ್ಟು ಅಕ್ರಮ: ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ಪ್ರಮಾಣಪತ್ರ ವಿತರಣೆಯಲ್ಲಿ ಮತ್ತಷ್ಟು ಅಕ್ರಮಗಳು ಪತ್ತೆಯಾಗಿವೆ. ರಸ್ತೆ ವಿಸ್ತರಣೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಕಳಪೆ ಕಟ್ಟಡ ನಿರ್ಮಿಸಿ ಟಿಡಿಆರ್‌ ಪಡೆದಿರುವುದು, ಸರ್ಕಾರದ ಜಮೀನುಗಳಿಗೆ ಟಿಡಿಆರ್‌ ಪಡೆದಿರುವುದು, ಬಹುಮಹಡಿ ಕಟ್ಟಡಗಳ ಎಫ್‌ಎಆರ್‌ ಹೆಚ್ಚಿಸಲು ನೀಡಿದ್ದ ಅಭಿವೃದ್ಧಿ ಹಕ್ಕು ಪ್ರಮಾಣಪತ್ರಗಳನ್ನು (ಡಿಆರ್‌ಸಿ) ಅಕ್ರಮವಾಗಿ ಟಿಡಿಆರ್‌ ಆಗಿ ಪರಿವರ್ತಿಸಿರುವುದು ಕಂಡುಬಂದಿದೆ ಎಂದು ತನಿಖಾ ತಂಡ ತಿಳಿಸಿದೆ.

₹ 75 ಕೋಟಿ ಹೆಚ್ಚುವರಿ ಪಾವತಿ: ಕಸ ವಿಲೇವಾರಿ ಗುತ್ತಿಗೆದಾರರಿಗೆ ₹ 75 ಕೋಟಿಯನ್ನು ಹೆಚ್ಚುವರಿಯಾಗಿ ಪಾವತಿಸಿರುವುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದ್ದರೂ, ಹಿಂಪಡೆಯಲು ಕ್ರಮ ಕೈಗೊಂಡಿಲ್ಲ. ಈ ವಿಭಾಗದಲ್ಲಿ ₹ 100 ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿರುವ ಆರೋಪದ ಮೇಲೆ ಹಲವು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಹೇಳಿದೆ.

ಟೆಂಡರ್‌, ಬಿಲ್‌ ಪಾವತಿಯಲ್ಲಿ ಅಕ್ರಮ

‘ಬೃಹತ್‌ ಕಾಮಗಾರಿಗಳ ಟೆಂಡರ್‌ ಮತ್ತು ಬಿಲ್‌ ಪಾವತಿಯಲ್ಲಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ. ದೊಡ್ಡ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿ, ಸಣ್ಣ ಕಾಮಗಾರಿಗಳ ಗುತ್ತಿಗೆದಾರರಿಗೆ ಬಾಕಿ ಇರಿಸಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಅಕ್ರಮವಾಗಿ ಬಿಲ್‌ ಪಾವತಿಸಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ವಿವರ ನೀಡಿದ್ದಾರೆ.

ಕೆಲವು ಪ್ರಕರಣಗಳಲ್ಲಿ ತರಾತುರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ವಿಲೇವಾರಿಗೆ ಬಾಕಿ ಇರುವ ಟೆಂಡರ್‌ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

₹ 15 ಕೋಟಿ ತೆರಿಗೆ ಪಾವತಿ

ಎಸಿಬಿ ಅಧಿಕಾರಿಗಳು ಶನಿವಾರ ಶೋಧ ಆರಂಭಿಸಿದ್ದರು. ಆ ಬಳಿಕ ಮೂರೇ ದಿನಗಳಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ಸಾರ್ವಜನಿಕರು ₹ 15 ಕೋಟಿ ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಿರುವುದು ಬುಧವಾರದ ಪರಿಶೀಲನೆ ವೇಳೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.