ADVERTISEMENT

ಬೆಂಗಳೂರು | ಅಪಘಾತ ಪ್ರಕರಣ: ಬಿ.ಇ ವಿದ್ಯಾರ್ಥಿಗೆ ವೈದ್ಯಕೀಯ ಪರೀಕ್ಷೆ

ಮದ್ಯ ಸೇವಿಸಿ ಕಾರು ಚಾಲನೆಯ ಶಂಕೆ, ವರದಿ ಬಳಿಕ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:10 IST
Last Updated 19 ಡಿಸೆಂಬರ್ 2025, 0:10 IST
<div class="paragraphs"><p>ಅಪಘಾತ,&nbsp;–ಪ್ರಾತಿನಿಧಿಕ ಚಿತ್ರ</p></div>

ಅಪಘಾತ, –ಪ್ರಾತಿನಿಧಿಕ ಚಿತ್ರ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆರ್‌ಎಂವಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕ, ಬಿ.ಇ ವಿದ್ಯಾರ್ಥಿ ಶಿಶಿರ್ ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಆರ್‌ಎಂವಿ ಎರಡನೇ ಹಂತದಲ್ಲಿ ಬಿ.ಇ ವಿದ್ಯಾರ್ಥಿಯು ಅಜಾಗರೂಕತೆಯಿಂದ ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ಸರಣಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ವಕೀಲ ರಾಮಚಂದ್ರರೆಡ್ಡಿ (63) ಎಂಬುವರು ಮೃತಪಟ್ಟು ಮೂವರು ಗಾಯಗೊಂಡಿದ್ದರು. ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ಧಾರೆ. 

ಎಚ್‍ಎಸ್‍ಆರ್ ಲೇಔಟ್‍ನ ರಾಮಚಂದ್ರರೆಡ್ಡಿ, ಹೈಕೋರ್ಟ್ ವಕೀಲರಾಗಿದ್ದರು. ಕಾರಿನಲ್ಲಿ ಆರ್‌ಎಂವಿ ಕ್ಲಬ್ ಬಳಿ ಬಂದಿದ್ದ ಅವರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿತ್ತು.

‘ಶಿಶಿರ್ ಎಂಬಾತ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿಕೊಂಡು ಬಂದು ಮೊದಲಿಗೆ ರಾಮಚಂದ್ರರೆಡ್ಡಿ ಅವರಿಗೆ ಗುದ್ದಿಸಿದ್ದ. ನಂತರ ದ್ವಿಚಕ್ರ ವಾಹನಕ್ಕೆ, ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ವಾಹನ ಡಿಕ್ಕಿ ಹೊಡೆಸಿದ್ದ’ ಎಂದು ಸಂಜಯನಗರ ಠಾಣೆಯ ಪೊಲೀಸರು ತಿಳಿಸಿದರು.

ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸ್ವಾತಿ ಮತ್ತು ಭರತ್ ಎಂಬುವರೂ ಗಾಯಗೊಂಡಿದ್ದಾರೆ. ಶಿಶಿರ್ ಹಾಗೂ ಆತನ ಜತೆ ಕಾರಿನಲ್ಲಿದ್ದ ಸ್ನೇಹಿತೆ ಶ್ರೀನಿಧಿ ಸಹ ಗಾಯಗೊಂಡಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಹುಬ್ಬಳ್ಳಿಯ ಶಿಶಿರ್, ನಗರದ ಎಲೆಕ್ಟ್ರಾನಿಕ್‍ ಸಿಟಿಯಲ್ಲಿ ವಾಸವಾಗಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿರುವ ಆತ ತನ್ನ ತಂದೆಯ ಕಾರು ಚಾಲನೆ ಮಾಡಿಕೊಂಡು ಬಂದಿದ್ದ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.