ADVERTISEMENT

ಮಗುಚಿದ ಲಾರಿ: ಮರದ ದಿಮ್ಮಿಗಳು ಬಿದ್ದು ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 15:29 IST
Last Updated 22 ಜುಲೈ 2022, 15:29 IST
ನಾಗರಬಾವಿ ಮೇಲ್ಸೇತುವೆಯಲ್ಲಿ ಬಿದ್ದಿದ್ದ ಮರದ ದಿಮ್ಮಿಗಳು ಹಾಗೂ ಜಖಂಗೊಂಡಿದ್ದ ಟಿವಿಎಸ್ ಸ್ಕೂಟಿ
ನಾಗರಬಾವಿ ಮೇಲ್ಸೇತುವೆಯಲ್ಲಿ ಬಿದ್ದಿದ್ದ ಮರದ ದಿಮ್ಮಿಗಳು ಹಾಗೂ ಜಖಂಗೊಂಡಿದ್ದ ಟಿವಿಎಸ್ ಸ್ಕೂಟಿ   

ಬೆಂಗಳೂರು: ನಾಗರಬಾವಿ ಮೇಲ್ಸೇತುವೆಯಲ್ಲಿ ಲಾರಿಯೊಂದು ಮುಗುಚಿ ಬಿದ್ದಿದ್ದರಿಂದ, ಅದರಲ್ಲಿದ್ದ ಮರದ ದಿಮ್ಮಿಗಳು ದ್ವಿಚಕ್ರ ವಾಹನಗಳ ಮೇಲೆ ಬಿದ್ದು ಹಿಂಬದಿ ಸವಾರ ಎನ್. ಮುಖೇಶ್ (23) ಎಂಬುವರು ಮೃತಪಟ್ಟಿದ್ದಾರೆ.

‘ಶುಕ್ರವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಮರದ ದಿಮ್ಮಿಗಳು ಮೈ ಮೇಲೆ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಮುಖೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರರಾದ ಡೇವಿಡ್ (26) ಹಾಗೂ ಶಿವು (26) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.

7 ತಿಂಗಳ ಹಿಂದೆಯಷ್ಟೇ ಮದುವೆ: ‘ತಮಿಳುನಾಡಿನ ತಿರುವಣ್ಣಾಮಲೈ ಮುಖೇಶ್, ನಗರದ ಆರ್‌ಎಂಸಿ ಯಾರ್ಡ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 7 ತಿಂಗಳ ಹಿಂದೆಯಷ್ಟೇ ಲಗ್ಗೆರೆಯ ಯುವತಿಯನ್ನು ಮದುವೆಯಾಗಿದ್ದರು. ಪತ್ನಿ ಮನೆಯಲ್ಲೇ ಉಳಿದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ತಿರುವಣ್ಣಾಮಲೈನಲ್ಲಿರುವ ತಾಯಿ ಹಾಗೂ ಅಜ್ಜಿ ನೋಡಿಕೊಂಡು ಬರಲೆಂದು ಮುಖೇಶ್ ಇತ್ತೀಚೆಗೆ ಊರಿಗೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ನಗರಕ್ಕೆ ವಾಪಸು ಬಂದು ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಇಳಿದಿದ್ದರು. ಪತ್ನಿಯ ಸಹೋದರ ಡೇವಿಡ್, ಟಿವಿಎಸ್ ಸ್ಕೂಟಿಯಲ್ಲಿ (ಕೆಎ 41 ಸಿ 8129) ಬೆಳಿಗ್ಗೆ 4.30ರ ಸುಮಾರಿಗೆ ನಿಲ್ದಾಣಕ್ಕೆ ಬಂದಿದ್ದರು. ಮುಖೇಶ್‌ ಅವರನ್ನು ಹತ್ತಿಸಿಕೊಂಡು ಮನೆಯತ್ತ ಹೊರಟಿದ್ದರು’ ಎಂದು ಹೇಳಿದರು.

‘ಆಂಧ್ರಪ್ರದೇಶದಿಂದ ಮರದ ದಿಮ್ಮಿಗಳನ್ನು ಹೊತ್ತು ತಂದಿದ್ದ ಲಾರಿ (ಎಪಿ 26 ಟಿಎ 4266), ಸುಮ್ಮನಹಳ್ಳಿ ಕಡೆಯಿಂದ ನಾಯಂಡನಹಳ್ಳಿ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಹೊರಟಿತ್ತು. ನಾಗರಭಾವಿ ಬಳಿ ಚಾಲಕ ಲಾರಿಯನ್ನು ಅತಿ ವೇಗವಾಗಿ ಚಲಾಯಿಸಿದ್ದ. ನಿಯಂತ್ರಣ ತಪ್ಪಿ ಲಾರಿ ಮೇಲ್ಸೇತುವೆಯಲ್ಲೇ ಮಗುಚಿ ಬಿದ್ದಿತ್ತು. ಅದರಲ್ಲಿದ್ದ ಮರದ ದಿಮ್ಮಿಗಳು, ಎದುರಿನ ರಸ್ತೆಯಲ್ಲಿ ಹೊರಟಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.