ADVERTISEMENT

ಕಾರಿನ ಚಕ್ರ ಹರಿದು ಮಗು ಸಾವು: ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ನೀಡಿದ್ದ ಸುಳಿವು

ಚಾಲಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 20:49 IST
Last Updated 16 ಡಿಸೆಂಬರ್ 2023, 20:49 IST
ಮಗುವಿನ ಮೇಲೆ ಹರಿದಿದ್ದ ಕಾರು
ಮಗುವಿನ ಮೇಲೆ ಹರಿದಿದ್ದ ಕಾರು   

ಬೆಂಗಳೂರು: ಕಸವನಹಳ್ಳಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಎದುರು ಕಾರಿನ ಚಕ್ರ ಮೈ ಮೇಲೆ ಹರಿದು ಮೂರು ವರ್ಷದ ಹೆಣ್ಣು ಮಗು ಅರ್ಬಿನಾ ಮೃತಪಟ್ಟಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯದ ಭದ್ರತಾ ಸಿಬ್ಬಂದಿ ಜೋಗ್ ಜತಾರ್ ಅವರ ಪುತ್ರಿಯಾಗಿದ್ದ ಅರ್ಬಿನಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, ಕಾರಿನ ಚಕ್ರ ಹರಿದು ಮಗು ಮೃತಪಟ್ಟಿದ್ದು ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಮಗುವಿನ ಸಾವಿಗೆ ಕಾರಣವಾದ ಆರೋಪದಡಿ ಚಾಲಕ ಸುಮನ್ ಸಿ. ಕೇಶವ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತ, ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ’ ಎಂದು ಹೇಳಿದರು.

ADVERTISEMENT

ಪ್ರವೇಶ ದ್ವಾರದಲ್ಲಿ ಆಟವಾಡುತ್ತಿದ್ದ ಮಗು: ‘ನೇಪಾಳದ ಜೋಗ್ ಜತಾರ್, ಪತ್ನಿ ಹಾಗೂ ಮಕ್ಕಳ ಜೊತೆ ನಗರಕ್ಕೆ ಬಂದಿದ್ದರು. ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದರು. ಅಲ್ಲಿಯೇ ಅವರಿಗೆ ಕೊಠಡಿಯೊಂದನ್ನು ನೀಡಲಾಗಿತ್ತು. ಮಕ್ಕಳ ಜೊತೆ ದಂಪತಿ ನೆಲೆಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಡಿ. 9ರಂದು ಬೆಳಿಗ್ಗೆ ಮಗು ಅರ್ಬಿನಾ, ಅಪಾರ್ಟ್‌ಮೆಂಟ್ ಸಮುಚ್ಚಯದ ಪ್ರವೇಶ ದ್ವಾರದಲ್ಲಿ ಆಟವಾಡುತ್ತ ಕುಳಿತಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಸುಮನ್, ಪಾರ್ಕಿಂಗ್‌ನಲ್ಲಿದ್ದ ಕಾರು ಚಲಾಯಿಸಿಕೊಂಡು ರಸ್ತೆಯತ್ತ ಸಾಗಿದ್ದರು. ಪ್ರವೇಶ ದ್ವಾರದಲ್ಲಿದ್ದ ಮಗುವನ್ನು ಗಮನಿಸಿರಲಿಲ್ಲ. ಮಗುವಿನ ಮೇಲೆಯೇ ಕಾರಿನ ಚಕ್ರ ಹರಿದಿತ್ತು. ಸುಮನ್ ಸಹ ಸ್ಥಳದಿಂದ ಹೊರಟು ಹೋಗಿದ್ದರು’ ಎಂದು ಹೇಳಿವೆ.

‘ತೀವ್ರ ಗಾಯಗೊಂಡಿದ್ದ ಮಗು, ಸ್ಥಳದಲ್ಲಿಯೇ ಬಿದ್ದು ನರಳುತ್ತಿತ್ತು. ಅಪಘಾತದ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಸ್ಥಳಕ್ಕೆ ಬಂದಿದ್ದ ತಂದೆ ಜೋಗ್ ಜತಾರ್, ಮಗುವಿನ ದೇಹದಿಂದ ರಕ್ತ ಬರುತ್ತಿದ್ದದ್ದನ್ನು ಗಮನಿಸಿದ್ದರು. ಪ್ರವೇಶ ದ್ವಾರದಲ್ಲಿದ್ದ ಕಬ್ಬಿಣದ ರಾಡ್ ತಾಗಿ ರಕ್ತ ಬರುತ್ತಿರಬಹುದೆಂದು ತಿಳಿದು ಮಗುವನ್ನು ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ: ‘ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ್ದ ವೈದ್ಯರು, ಸ್ಕ್ಯಾನಿಂಗ್ ಹಾಗೂ ಇತರೆ ಪರೀಕ್ಷೆಗಳಿಗಾಗಿ ₹ 30 ಸಾವಿರ ಪಾವತಿಸುವಂತೆ ಹೇಳಿದ್ದರು. ಹಣವಿಲ್ಲವೆಂದು ಹೇಳಿದ್ದ ತಂದೆ ಜೋಗ್, ಮಗುವನ್ನು ಅಲ್ಲಿಂದ ಸಂಜಯಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಜಯಗಾಂಧಿ ಆಸ್ಪತ್ರೆ ವೈದ್ಯರು ಸಹ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಿದ್ದರು. ಪರೀಕ್ಷಿಸಿದ್ದ ನಿಮ್ಹಾನ್ಸ್ ವೈದ್ಯರು, ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಅಸಹಜ ಸಾವು ಪ್ರಕರಣ: ‘ಕಬ್ಬಿಣದ ರಾಡ್ ತಾಗಿ ಮಗು ಮೃತಪಟ್ಟಿರುವುದಾಗಿ ತಂದೆ ಹೇಳಿದ್ದರಿಂದ, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಎದುರಿನ ಕಟ್ಟಡದಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಆರೋಪಿ ಸುಮನ್, ಮಗುವಿನ ಮೇಲೆ ಕಾರು ಹರಿಸಿದ್ದ ದೃಶ್ಯ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬೆಳ್ಳಂದೂರು ಸಂಚಾರ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದರು.

ಕಾರು ಹರಿದಿದ್ದರಿಂದ ಗಾಯಗೊಂಡು ಬಿದ್ದು ಎದ್ದು ನರಳುತ್ತಿದ್ದ ಮಗು
ನರಳುತ್ತಿದ್ದ ಮಗುವಿನ ಬಳಿ ಬಂದು ಮೇಲಕ್ಕೆ ಎತ್ತಲು ಪ್ರಯತ್ನಿಸಿದ್ದ ಬಾಲಕ
ನರಳುತ್ತಿದ್ದ ಮಗುವನ್ನು ಎತ್ತಿಕೊಂಡು ಹೋದ ತಂದೆ ಜೋಗ್ ಜತಾರ್

‘ನರಳಾಡಿದರೂ ಹತ್ತಿರ ಹೋಗದ ಜನ’!

ಅಪಘಾತದ ಬಳಿಕ ಸ್ಥಳದಲ್ಲಿಯೇ ಬಿದ್ದು ಮಗು ನರಳಾಡುತ್ತಿತ್ತು. ಪದೇ ಪದೇ ಏಳಲು ಪ್ರಯತ್ನಿಸಿ ಪುನಃ ಬೀಳುತ್ತಿತ್ತು. ಸ್ಥಳಕ್ಕೆ ಬಂದಿದ್ದ 5 ವರ್ಷದ ಬಾಲಕನೊಬ್ಬ ಮಗುವನ್ನು ನೋಡಿ ಕೈ ಹಿಡಿದು ಎಬ್ಬಿಸಲು ಮುಂದಾಗಿದ್ದ. ಆದರೆ ಅದು ಸಾಧ್ಯವಾಗದಿದ್ದರಿಂದ ವಾಪಸು ಹೋಗಿದ್ದ. ಮಗುವಿಗೆ ಏನಾಗಿದೆ ? ಎಂಬುದು ಬಾಲಕನಿಗೆ ತಿಳಿದಿರಲಿಲ್ಲ. ಇದೇ ಮಾರ್ಗವಾಗಿ ಇಬ್ಬರು ಯುವಕರು ಹಾಗೂ ಸ್ಥಳೀಯ ನಿವಾಸಿಯೊಬ್ಬರು ಹಾದು ಹೋಗಿದ್ದರು. ಅವರ‍್ಯಾರೂ ಮಗುವಿನತ್ತ ತಿರುಗಿ ನೋಡಿರಲಿಲ್ಲ. ಎರಡೂವರೆ ನಿಮಿಷಗಳ ನಂತರ ತಂದೆ ಸ್ಥಳಕ್ಕೆ ಬಂದು ಮಗುವನ್ನು ಎತ್ತಿಕೊಂಡು ಹೋಗಿದ್ದರು. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.