ADVERTISEMENT

ಪ್ರತ್ಯೇಕ ಅಪಘಾತ; ನಾಲ್ವರ ದುರ್ಮರಣ

ವೃದ್ಧೆ ಸಾವಿಗೆ ಕಾರಣನಾದ ವಿದ್ಯಾರ್ಥಿ * ದುಬೈಗೆ ಹೊರಟಿದ್ದ ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 18:03 IST
Last Updated 4 ಜನವರಿ 2020, 18:03 IST

ಬೆಂಗಳೂರು: ನಗರದ ಮೂರು ಕಡೆಗಳಲ್ಲಿ ಶನಿವಾರ ಅಪಘಾತ ಸಂಭವಿಸಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯ ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಪುಟ್ಟ (25) ಹಾಗೂ ಕುಮಾರ್ (20) ಮೃತರು. ಸಂಜೆ 4.10ರ ಸುಮಾರಿಗೆ ಬಿ.ಜಿ.ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅತೀ ವೇಗವಾಗಿ ಬಂದಿದ್ದ ಅಪರಿಚಿತ ವಾಹನ, ಪುಟ್ಟ ಹಾಗೂ ಕುಮಾರ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇಬ್ಬರೂ ರಸ್ತೆಯಲ್ಲೇ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಅಸುನೀಗಿದರು. ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ’ ಎಂದರು.

ಮನೆ ಮುಂದೆ ಕುಳಿತಿದ್ದ ವೃದ್ಧೆ ಸಾವು: ಜಾಲಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾರು ಗುದ್ದಿದ್ದರಿಂದ ಗಂಗಮ್ಮ (65) ಎಂಬುವರು ಮೃತಪಟ್ಟಿದ್ದಾರೆ.

‘ಸ್ಥಳೀಯ ನಿವಾಸಿ ಗಂಗಮ್ಮ ತಮ್ಮ ಮನೆ ಎದುರಿನ ಕಾಂಪೌಂಡ್ ಬಳಿ ಕುಳಿತಿದ್ದರು. ಅದೇ ವೇಳೆಯೇ ರೋಹಿತ್ ರೆಡ್ಡಿ ಎಂಬಾತ ನಿರ್ಲಕ್ಷ್ಯದಿಂದ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವೃದ್ಧೆಗೆ ಗುದ್ದಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಸ್ಥಳದಲ್ಲೇ ಅಸುನೀಗಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ರೋಹಿತ್ ರೆಡ್ಡಿ, ಖಾಸಗಿ ಕಾಲೇಜೊಂದರ ವಿದ್ಯಾರ್ಥಿ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ಎಂಜಿನಿಯರ್ ಸಾವು: ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ಮೇಲ್ಸೇತುವೆಯಲ್ಲಿ ಕಾರು ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ವಾಸುದೇವ್ ರಾವ್ ಗೋಪಿ ಶೆಟ್ಟಿ (58) ಎಂಬುವರು ಮೃತಪಟ್ಟಿದ್ದಾರೆ.

‘ನಗರದ ನಿವಾಸಿಯಾದ ವಾಸುದೇವ್‌, ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ರಜೆ ಹಾಕಿ ಬೆಂಗಳೂರಿಗೆ ಬಂದಿದ್ದರು. ಶನಿವಾರ ಬೆಳಿಗ್ಗೆ ಪುನಃ ದುಬೈಗೆ ಹೊರಟಿದ್ದರು. ಅವರನ್ನು ವಿಮಾನ ನಿಲ್ದಾಣದವರೆಗೆ ಬಿಟ್ಟುಬರಲು ಪತ್ನಿಯೇ ಕಾರು ಚಾಲಾಯಿಸಿಕೊಂಡು ತೆರಳುತ್ತಿದ್ದರು. ಅದೇ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಹೆಬ್ಬಾಳ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.