ADVERTISEMENT

ಅಪಘಾತ; ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಾಲೇಜು ಬಸ್‌ಗೆ ಡಿಕ್ಕಿ ಹೊಡೆದ ಶಾಲಾ ಬಸ್‌ ‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 18:41 IST
Last Updated 11 ಫೆಬ್ರುವರಿ 2019, 18:41 IST
ಅಪಘಾತದಲ್ಲಿ ಜಖಂಗೊಂಡ ಬಸ್
ಅಪಘಾತದಲ್ಲಿ ಜಖಂಗೊಂಡ ಬಸ್   

ಬೆಂಗಳೂರು: ಬಾಗಲೂರು ಸಂತೆ ಬಳಿ ಸೋಮವಾರ ಬೆಳಿಗ್ಗೆ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಸ್ಥಳೀಯ ನಾಗಾರ್ಜುನ ಕಾಲೇಜು ವಿದ್ಯಾರ್ಥಿ ನಿತೀಶ್‌,ಸಂಜಯ್ ಹಾಗೂ ದರ್ಶನ್ ಗಾಯಗೊಂಡವರು. ನಿತೀಶ್‌ನ ಕಾಲಿಗೆ ಪೆಟ್ಟಾಗಿದ್ದು, ಹೆಬ್ಬಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ.

‘ನಾಗಾರ್ಜುನ ಕಾಲೇಜು ಬಸ್ ಹಾಗೂ ಡೆಲ್ಲಿ ಪಬ್ಲಿಕ್ ಶಾಲೆಯ ಬಸ್‌, ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟಿದ್ದವು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಎರಡೂ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಒಂದು ಬಸ್, ರಸ್ತೆ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಕಂಬಕ್ಕೆ ಗುದ್ದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಅಪಘಾತದಿಂದ ಎರಡೂ ಬಸ್ಸಿನ ಗಾಜುಗಳು ಒಡೆದಿದ್ದು, ಮುಂಭಾಗ ಜಖಂಗೊಂಡಿದೆ. ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಡೆಲ್ಲಿ ಪಬ್ಲಿಕ್ ಶಾಲೆಯ ಬಸ್‌ ಚಾಲಕ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶಾಲೆ ಆಡಳಿತ ಮಂಡಳಿಗೂ ಎಚ್ಚರಿಕೆ ನೀಡಿದ್ದೇವೆ’ ಎಂದರು.

‘ಕಾಲೇಜು ಬಸ್ಸಿನಲ್ಲಿ 30 ವಿದ್ಯಾರ್ಥಿಗಳು ಹಾಗೂ ಶಾಲೆ ಬಸ್ಸಿನಲ್ಲಿ ಎಂಟು ವಿದ್ಯಾರ್ಥಿಗಳಿದ್ದರು. ಮೂವರಿಗೆ ಗಾಯವಾಗಿದ್ದು ಬಿಟ್ಟರೆ ಉಳಿದವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ವಿದ್ಯಾರ್ಥಿಗಳನ್ನು ಬೇರೆ ವಾಹನಗಳಲ್ಲಿ ಕಳುಹಿಸಿಕೊಡಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.