ADVERTISEMENT

ಬೆಂಗಳೂರು | MNCಯಲ್ಲಿ ಉದ್ಯೋಗ ಕೊಡಿಸುವುದಾಗಿ ₹14.23 ಲಕ್ಷ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮೇ 2025, 16:07 IST
Last Updated 14 ಮೇ 2025, 16:07 IST
ಪತ್ನೂಲ್‌ ಖಲಂದರ್‌ ಖಾನ್‌
ಪತ್ನೂಲ್‌ ಖಲಂದರ್‌ ಖಾನ್‌   

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳಲ್ಲಿ(ಎಂಎನ್‌ಸಿ) ಉದ್ಯೋಗ ಕೊಡಿಸುವುದಾಗಿ ನಂಬಿಸಿ ಎಂಟು ಅಭ್ಯರ್ಥಿಗಳಿಂದ ₹14.23 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ. ನಗರದ ಐದನೇ ಹಂತದಲ್ಲಿ ನೆಲಸಿದ್ದ ಪತ್ನೂಲ್‌ ಖಲಂದರ್‌ ಖಾನ್‌ (43) ಬಂಧಿತ ಆರೋಪಿ.

ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ವೀರೇಶ್‌ ಹಾಗೂ ಇನಾಯತ್‌ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ADVERTISEMENT

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯಿಂದ ₹1.50 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ.

ಅಭ್ಯರ್ಥಿ ಗೀತಾ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

‘2024ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಪತ್ನೂಲ್‌ ಖಲಂದರ್‌ ಖಾನ್‌ಗೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ. ನಂತರ, ಬಿಟಿಎಂ ಲೇಔಟ್‌ನ ಡಾಲರ್ಸ್‌ ಕಾಲೊನಿಯಲ್ಲಿರುವ ಮ್ಯಾಗ್ನಾಮಿಕ್ಸ್‌ ಸರ್ವಿಸ್‌ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಆರೋಪಿ, ಸಿಂಥೆಟಿಕ್‌ ಸಾಫ್ಟ್‌ವೇರ್‌ ಕಂಪನಿ ಹಾಗೂ ಮ್ಯಾಗ್ನಾಮಿಕ್ಸ್ ಸರ್ವಿಸ್‌ ಕಂಪನಿಗೆ ಕೆಲಸಕ್ಕೆ ಬರುತ್ತಿದ್ದ ಅಭ್ಯರ್ಥಿಗಳ ಬಳಿ ಇನ್ನೂ ಉತ್ತಮ ಎಂಎನ್‌ಸಿಗಳಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ, ಎಂಟು ಅಭ್ಯರ್ಥಿಗಳಿಂದ ಹಣ ಪಡೆದುಕೊಂಡಿದ್ದ. ಕೃತ್ಯಕ್ಕೆ ವೀರೇಶ್ ಹಾಗೂ ಇನಾಯತ್‌ ಬೆಂಬಲ ನೀಡಿದ್ದರು. ಹಣ ನೀಡಿದ ಅಭ್ಯರ್ಥಿಗಳು, ಆರೋಪಿ ಪತ್ನೂಲ್‌ ಖಲಂದರ್‌ ಖಾನ್‌ ಬಳಿ ಕೆಲಸದ ಬಗ್ಗೆ ವಿಚಾರಣೆ ನಡೆಸುತ್ತಿದ್ದರು. ಅಭ್ಯರ್ಥಿಗಳಿಗೆ ಆರೋಪಿ ಭರವಸೆ ನೀಡುತ್ತಲೇ ದಿನದೂಡುತ್ತಿದ್ದ. ಕೆಲವು ತಿಂಗಳುಗಳು ಕಳೆದ ಬಳಿಕ ವಂಚನೆ ಎಂಬುದು ಗೊತ್ತಾಗಿ ದೂರು ನೀಡಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಬಾಷ್‌, ಮೈಕ್ರೊಸಾಫ್ಟ್‌ ಸೇರಿದಂತೆ ವಿವಿಧ ಎಂಎನ್‌ಸಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಪ್ರತಿ ಅಭ್ಯರ್ಥಿಯಿಂದ ₹2.70 ಲಕ್ಷ ಹಣವನ್ನು ಆರೋಪಿಗಳು ಪಡೆದುಕೊಂಡಿದ್ದರು. ಅಭ್ಯರ್ಥಿಗಳಿಂದ ಹಂತ ಹಂತವಾಗಿ ಫೋನ್‌ ಪೇ ಹಾಗೂ ಗೂಗಲ್‌ ಮೂಲಕ ಹಣ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.