ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಮಹಿಳಾ ಪ್ರಯಾಣಿಕರ ವಿಡಿಯೊ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದ ದಿಗಂತ್ (28) ಬಂಧಿತ ಆರೋಪಿ. ಕುಟುಂಬದೊಂದಿಗೆ ಪೀಣ್ಯದ ತಿಗಳರಪಾಳ್ಯದಲ್ಲಿ ಆರೋಪಿ ವಾಸವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಗಂತ್ ಇಂದಿರಾನಗರದ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದು, ಪ್ರತಿದಿನ ಮೆಟ್ರೊದಲ್ಲಿ ಓಡಾಡುತ್ತಿದ್ದ. ಪ್ರಯಾಣದ ವೇಳೆ ಮಹಿಳೆಯರ ಹಾಗೂ ಯುವತಿಯರ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು 'ಮೆಟ್ರೊ ಚೀಕ್ಸ್‘ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯ ಮೆಟ್ರೊದಲ್ಲಿ ಸಂಚರಿಸುತ್ತಿದ್ದ ಕಾರಣ ಬ್ಲಾಗರ್‌ಗಳಂತೆ ಈತ ಸಹ ಮೊಬೈಲ್‌ನಲ್ಲಿ ಮಹಿಳಾ ಪ್ರಯಾಣಿಕರ ಆಕ್ಷೇಪಾರ್ಹ ವಿಡಿಯೊಗಳನ್ನು ಸೆರೆಹಿಡಿದು ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನ್ನ ಖಾತೆಯಲ್ಲಿನ ವಿಡಿಯೊಗಳನ್ನು ಆರೋಪಿ ಅಳಿಸಿ ಹಾಕಿದ್ದ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14 ವಿಡಿಯೊ ಅಪ್‌ಲೋಡ್:
ಆರೋಪಿಯು ಮೆಟ್ರೊದಲ್ಲಿ ಸಂಚರಿಸುವ ಹಾಗೂ ನಿಲ್ದಾಣಗಳಲ್ಲಿ ನಡೆದು ಹೋಗುವ ಮಹಿಳೆಯರನ್ನು ಹಿಂಬಾಲಿಸಿ, ಅವರ ದೇಹದ ಹಿಂಭಾಗ ಹಾಗೂ ಮುಂಭಾಗವನ್ನು ವಿಡಿಯೊ ಚಿತ್ರೀಕರಣ ಮಾಡಿದ್ದ. ಒಟ್ಟು14 ವಿಡಿಯೊಗಳನ್ನು ಮೆಟ್ರೊ ಚೀಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.