ADVERTISEMENT

ಹಜ್ ಭವನದಲ್ಲಿ ಗಲಾಟೆ ಆರೋಪಿಗಳು

ಕ್ವಾರಂಟೈನ್‌ನಲ್ಲಿದ್ದ ತಬ್ಲೀಗ್‌ಗಳು ಗೊಲ್ಲಹಳ್ಳಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 20:19 IST
Last Updated 24 ಏಪ್ರಿಲ್ 2020, 20:19 IST
ಹಜ್ ಭವನ
ಹಜ್ ಭವನ   

ಬೆಂಗಳೂರು: ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರದ ಜಿಲ್ಲಾ ಕಾರಾಗೃಹದಿಂದ ಬೆಂಗಳೂರಿನ ಚೊಕ್ಕನಹಳ್ಳಿಯಲ್ಲಿರುವ ಹಜ್‌ ಭವನಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಅವರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ.

ಈ ಹಿಂದೆ ಹಜ್‌ ಭವನದಲ್ಲಿ ಕ್ವಾರಂಟೈನ್‌ನಲ್ಲಿದ್ದ ಅವಧಿ ಮುಗಿಸಿದ್ದ ತಬ್ಲೀಗ್‌ಗಳನ್ನು ಸ್ಥಳಾಂತರ ಮಾಡಿ ಗೊಲ್ಲಹಳ್ಳಿಯ ವಸತಿಗೃಹವೊಂದಕ್ಕೆ ಕರೆದೊಯ್ಯಲಾಗಿದೆ.

ಬಂಧಿತ ಕೆಲ ಆರೋಪಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ, ಎಲ್ಲ ಆರೋಪಿಗಳನ್ನು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ರಾಮನಗರದಿಂದ ಬೆಂಗಳೂರಿಗೆ ಶುಕ್ರವಾರ ಸಂಜೆಯ ಕರೆತರಲಾಯಿತು. ಹಜ್ ಭವನದಲ್ಲೇ ಆರೋಪಿಗಳನ್ನು ಇರಿಸಿ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ADVERTISEMENT

ತಬ್ಲೀಗ್‌ಗಳ ವಾಸ ವಿರೋಧಿಸಿ ಪ್ರತಿಭಟನೆ: ಗಲಾಟೆ ಆರೋಪಿಗಳನ್ನು ಹಜ್ ಭವನದಲ್ಲಿ ಇರಿಸಲು ತೀರ್ಮಾನಿಸುತ್ತಿದ್ದಂತೆ, ಹಜ್‌ ಭವನ
ದಲ್ಲಿದ್ದ ಕ್ವಾರಂಟೈನ್‌ಗೆ ಇರಿಸಲಾಗಿದ್ದ ತಬ್ಲೀಗ್‌ಗಳನ್ನು ಬೇರೆ ಸ್ಥಳಾಂತರಿಸಲು ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು ಕ್ರಮ ಕೈಗೊಂಡಿದ್ದರು.

ಯಲಹಂಕ ಬಳಿಯ ಅಳ್ಳಾಳಸಂದ್ರದಲ್ಲಿರುವ ರಾಯಲ್ ಆರ್ಕೆಡ್‌ ರೆಸಾರ್ಟ್‌ಗೆ ತಬ್ಲೀಗ್‌ಗಳನ್ನು ಕರೆದೊಯ್ದಿದ್ದರು. ಇದು ಗೊತ್ತಾಗುತ್ತಿದ್ದಂತೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅದಕ್ಕೆ ಮಣಿದು ತಬ್ಲೀಗ್‌ಗಳನ್ನು ರಾತ್ರೋರಾತ್ರಿ ಗೊಲ್ಲಹಳ್ಳಿಗೆ ಕರೆದೊಯ್ಯಲಾಯಿತು.

‘ವಿದೇಶದಿಂದ ಬಂದಿದ್ದ 37 ಮಂದಿ ಧರ್ಮ ಪ್ರಚಾರಕನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿಯೂ ಮುಗಿದಿತ್ತು. ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಅವರು ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹಜ್‌ ಭವನದಲ್ಲೇ ಉಳಿದುಕೊಂಡಿದ್ದರು. ಅವರನ್ನೇ ಬೇರೆಡೆ ಕಳುಹಿಸಿ, ಅವರ ಜಾಗದಲ್ಲೇ ಈಗ ಆರೋಪಿಗಳನ್ನು ಇರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.