ADVERTISEMENT

ಬ್ರಾಹ್ಮಣರ ಗುಂಪು ಕಟ್ಟಿಕೊಂಡು ಸಾಮಾಜಿಕ ಬಹಿಷ್ಕಾರ ಆರೋಪ: ಆರೋಪಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:58 IST
Last Updated 29 ಮಾರ್ಚ್ 2024, 15:58 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಅಪಾರ್ಟ್‌ಮೆಂಟ್‌ನಲ್ಲಿ ನೆರೆಹೊರೆಯ ಫ್ಲ್ಯಾಟ್ ಮಾಲೀಕರು ಬ್ರಾಹ್ಮಣರ ಗುಂಪು ಕಟ್ಟಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಿ, ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ದಲಿತ ಸಮುದಾಯದ (ಆದಿ ಕರ್ನಾಟಕ) ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್ಸಿ-ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ವಲಗೇರಹಳ್ಳಿ ಕೈಲಾಶ್ ಹೌಸಿಂಗ್ ಅಪಾರ್ಟ್‌ಮೆಂಟ್‌ನ ಜ್ಞಾನಭಾರತಿ ಎನ್‌ಕ್ಲೇವ್ ನಿವಾಸಿಗಳಾದ ನಿವೃತ್ತ ವಿಜ್ಞಾನಿ ರಾಮಾಂಜನೇಯಲು (67) ಮತ್ತು ಕೆಎಸ್ಎಫ್‌ಸಿ ವ್ಯವಸ್ಥಾಪಕ ಭಾಸ್ಕರ್ ನರಸಿಂಹಯ್ಯ (58) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿಕೆಯ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ದೂರುದಾರ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಏಕಮಾತ್ರ ಕಾರಣಕ್ಕಾಗಿ ಮೇಲ್ಮನವಿದಾರರು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಮೇಲ್ನೋಟಕ್ಕೇ ಪರಿಗಣಿಸಲು ಆಗುವುದಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದ ನಗರದ 70ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದೆ.

‘ಮೇಲ್ಮನವಿದಾರರು 15 ದಿನಗಳ ಒಳಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ಹಾಜರಾಗಿ ತಲಾ ಒಂದು ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು’ ಎಂಬುದೂ ಸೇರಿದಂತೆ ಇನ್ನಿತರೆ ಸಾಂಪ್ರದಾಯಿಕ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ. ಮೇಲ್ಮನವಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಮಠದ ಚಿದಾನಂದ ಸ್ವಾಮಿ ವಕಾಲತ್ತು ವಹಿಸಿದ್ದರು.

ಪ್ರಕರಣವೇನು?: ಮೈಸೂರು ರಸ್ತೆಯಲ್ಲಿನ ವಲಗೇರಹಳ್ಳಿ ಕೈಲಾಶ್ ಹೌಸಿಂಗ್ ಅಪಾರ್ಟ್‌ಮೆಂಟ್‌ನ ಜ್ಞಾನಭಾರತಿ ಎನ್‌ಕ್ಲೇವ್ ನಿವಾಸಿಯಾದ ಕೆ.ಎಸ್. ರವಿಕುಮಾರ್ (52) ದೂರು ದಾಖಲಿಸಿದ್ದರು. ‘ರಾಮಾಂಜನೇಯಲು ಮತ್ತು ಭಾಸ್ಕರ್ ನರಸಿಂಹಯ್ಯ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ನನ್ನ ಮೋಟಾರ್ ಸೈಕಲ್ ನಿಲ್ಲಿಸಿದಾಗ ಗಾಲಿ ಪಂಕ್ಚರ್ ಮಾಡಿ, ಸ್ಪಾರ್ಕ್ ಪ್ಲಗ್ ಕಿತ್ತು, ನನ್ನ ಫ್ಲ್ಯಾಟ್ ಮುಂದೆ ಕಸ ಚೆಲ್ಲಿ, ಟ್ಯೂಬ್‌ಲೈಟ್ ಆಫ್ ಮಾಡಿ ಕಿರುಕುಳ ನೀಡಿದ್ದಾರೆ. ಕ್ರಿಮಿನಲ್ ಪಿತೂರಿ ನಡೆಸಿ ಅನಗತ್ಯವಾಗಿ ಜಗಳ ಸೃಷ್ಟಿಸಲು ಬಯಸುತ್ತಿದ್ದಾರೆ. ಬ್ರಾಹ್ಮಣರ ಗುಂಪು ಕಟ್ಟಿಕೊಂಡು ನನಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ನಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ತಿಳಿದೂ ಎಲ್ಲರೆದುರಲ್ಲಿ ಬೈ-ಲಾ ಹೆಸರಿನಲ್ಲಿ ನನ್ನನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಆಕ್ಷೇಪಿಸಿ ರವಿಕುಮಾರ್ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.