ADVERTISEMENT

ಬಿ.ಪಿ. ಅನಂತರಾಜು ಆತ್ಮಹತ್ಯೆ ಪ್ರಕರಣ: ಆರೋಪಿ ರೇಖಾ ಆತ್ಮಹತ್ಯೆ ಯತ್ನ

ಅನಂತರಾಜು ಆತ್ಮಹತ್ಯೆ ಪ್ರಕರಣ * ಮತ್ತೊಂದು ಆಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 1:50 IST
Last Updated 2 ಜೂನ್ 2022, 1:50 IST
ಬಿ.ಪಿ. ಅನಂತರಾಜು
ಬಿ.ಪಿ. ಅನಂತರಾಜು   

ಬೆಂಗಳೂರು: ಹೆರೋಹಳ್ಳಿ ವಾರ್ಡ್‌ನ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು (46) ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರೇಖಾ, ಈ ಪ್ರಕರಣದಲ್ಲಿ ತನಗೆ ನ್ಯಾಯ ಸಿಗುವುದಿಲ್ಲ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅನಂತರಾಜು ಮೇ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಗಂಡನ ಪ್ರೇಯಸಿ ಮತ್ತು ಆಕೆಯ ಸಹಚರರ ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಸುಮಾ ದೂರು ನೀಡಿದ್ದರು.

ದೂರಿನ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುವ ವೇಳೆ, ರೇಖಾ ಮತ್ತು ಸುಮಾ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕರೆಗಳ ಸಂಭಾಷಣೆ ಬಹಿರಂಗವಾಗಿತ್ತು. ಅದರ ಆಧಾರದಲ್ಲಿ ರೇಖಾ ಅವರನ್ನು ಬಂಧಿಸಿದ್ದ ಪೊಲೀಸರು, ಸುಮಾ ಅವರನ್ನು‌ ಎರಡು ಬಾರಿ ವಿಚಾರಣೆ ನಡೆಸಿದ್ದರು. ಬಳಿಕ ರೇಖಾ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

ADVERTISEMENT

ಇದೀಗ ಪೊಲೀಸರಿಗೆ ದೂರು ನೀಡಿರುವ ರೇಖಾ, ‘ನನ್ನ ಮತ್ತು ಮಕ್ಕಳಿಗೆ ಜೀವಬೆದರಿಕೆ ಇದೆ. ಅನಂತರಾಜು ಆತ್ಮಹತ್ಯೆ ನೋವು ತಂದಿದೆ. ನಾನು ಹನಿಟ್ರ್ಯಾಪ್‌ ಮಾಡಿಲ್ಲ. ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಆರು ವರ್ಷದಿಂದ ನಾನು ಮತ್ತು ಅನಂತರಾಜು ಪರಸ್ಪರ ಇಚ್ಛೆಯಿಂದ ಜೊತೆಗಿದ್ದೆವು. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಬಲವಂತವಾಗಿ ಮರಣಪತ್ರ ಬರೆಸಿಕೊಂಡಿದ್ದಾರೆ’ ಎಂದು ರೇಖಾ ದೂರಿದ್ದಾರೆ.

‘ನಾನು ಸಾಮಾನ್ಯ ಮಹಿಳೆ. ನನಗೆ ದಿನೇ ದಿನೇ ಕಿರುಕುಳ ಹೆಚ್ಚುತ್ತಿದೆ. ನಾನು ಸುಮಾ ವಿರುದ್ದ ದೂರು ನೀಡುತ್ತೇನೆ. ನಾನು ಯಾವುದೇ ತನಿಖೆಗೂ ಸಿದ್ದ. ಮುಖ್ಯಮಂತ್ರಿ, ಗೃಹಸಚಿವರು ನನಗೆ ನ್ಯಾಯ ಕೊಡಿಸಬೇಕು. ನನ್ನಲ್ಲಿರುವ ಎಲ್ಲ ಆಡಿಯೊಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ’ ಎಂದಿದ್ದಾರೆ.‌

ಮತ್ತೊಂದು ಆಡಿಯೊ ಬಹಿರಂಗ

ಅನಂತರಾಜು ಪತ್ನಿ ಸುಮಾ ಮತ್ತು ಗೆಳತಿ ಕೆ.ಆರ್. ಪುರದ ರೇಖಾ ನಡುವೆ ನಡೆದ ಮಾತುಕತೆಯ ಮತ್ತೊಂದು ಆಡಿಯೊ ಬಹಿರಂಗವಾಗಿದೆ. ‘ಮನೆಯಲ್ಲಿ‌ ನಿನ್ನ ಮೇಲೆ ಬರೆದಿರುವ ಮರಣಪತ್ರ ಇದೆ. ಯಾವಾಗ ಬೇಕಾದರೂ ಕೇಸ್ ಮಾಡಬಹುದು’ ಎಂದು ಮರಣಪತ್ರ ಇಟ್ಟುಕೊಂಡು ರೇಖಾ ಅವರಿಗೆ ಸುಮಾ ಬೆದರಿಕೆ ಒಡ್ಡಿರುವುದು ಆಡಿಯೊದಲ್ಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.