ಬಂಧನ ( ಸಾಂಕೇತಿಕ ಚಿತ್ರ)
ಬೆಂಗಳೂರು: ಖಾಸಗಿ ಕಂಪನಿಯೊಂದರ ವೆಬ್‌ಸೈಟ್ ಹ್ಯಾಕಿಂಗ್‌ಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ₹4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹2 ಲಕ್ಷ ಪಡೆಯುತ್ತಿದ್ದ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯ ಎಸಿಪಿ ತನ್ವೀರ್ ಎಸ್.ಆರ್. ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.
ಅದ್ವಿ ಗ್ರೂಪ್ ಆಪ್ ಕಂಪನೀಸ್ ಎಂಬ ಉದ್ಯಮ ಸಮೂಹದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು, ಅದರಲ್ಲಿ ತಪ್ಪು ಮಾಹಿತಿ ಪ್ರಕಟಿಸಿದ್ದರು. ಇದರಿಂದ ಕಂಪನಿಗೆ ನಷ್ಟವಾಗುತ್ತಿತ್ತು. ಈ ಸಂಬಂಧ ಕಂಪನಿಯ ಮಾಲೀಕ ಮಧುಸೂದನ್ ಬಿ.ಎಸ್. ಅವರು ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೂ, ಆರೋಪಿಗಳನ್ನು ಬಂಧಿಸಿರಲಿಲ್ಲ.
ಆರೋಪಿಗಳನ್ನು ಬಂಧಿಸುವಂತೆ ಮಧುಸೂದನ್ ಅವರು ಮನವಿ ಮಾಡಿದ್ದರು. ಆರೋಪಿಗಳನ್ನು ಬಂಧಿಸಲು ₹4 ಲಕ್ಷ ಲಂಚ ನೀಡುವಂತೆ ಎಸಿಪಿ ಮತ್ತು ಎಎಸ್‌ಐ ಬೇಡಿಕೆ ಇಟ್ಟಿದ್ದರು. ₹2 ಲಕ್ಷ ಮುಂಗಡ ನೀಡುವಂತೆ ಮತ್ತು ಆರೋಪಿಗಳನ್ನು ಬಂಧಿಸಿದ ಬಳಿಕ ₹2 ಲಕ್ಷ ನೀಡುವಂತೆ ಸೂಚಿಸಿದ್ದರು. ಮಧುಸೂದನ್ ಅವರು ಈ ಕುರಿತು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2ಕ್ಕೆ ದೂರು ಸಲ್ಲಿಸಿದ್ದರು.
ಲಂಚದ ಹಣವನ್ನು ಎಎಸ್‌ಐ ಬಳಿ ನೀಡುವಂತೆ ಎಸಿಪಿ ತನ್ವೀರ್ ಸೂಚಿಸಿದ್ದರು. ಮಂಗಳವಾರ ರಾತ್ರಿ 8.30ರ ಸುಮಾರಿಗೆ ವಿದ್ಯಾರಣ್ಯಪುರದ ಆಟದ ಮೈದಾನದ ಬಳಿ ಬಂದು ಹಣ ತಲುಪಿಸುವಂತೆ ಕೃಷ್ಣಮೂರ್ತಿ ಸೂಚಿಸಿದ್ದರು. ಅದರಂತೆ ಅಲ್ಲಿಗೆ ಹೋದ ದೂರುದಾರರು ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. ನಂತರ ತನ್ವೀರ್ ಅವರನ್ನು ಬಂಧಿಸಲಾಯಿತು.
ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳನ್ನು ಏಪ್ರಿಲ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಯಿತು.
ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ-2ರ ಎಸ್‌ಪಿ ಕೆ. ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಚ್.ಜೆ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ವಿಜಯ್ ಕೃಷ್ಣ, ಪ್ರಶಾಂತ್, ಅಂಜನ್‌ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.