ADVERTISEMENT

ಎಸಿಪಿ ವಿರುದ್ಧ ದಾಖಲಾಗುತ್ತ ಕೇಸ್‌?

ರವಿ ಪೂಜಾರಿ ಜೊತೆ ಸಂಪರ್ಕ * ಹಿರಿಯ ಅಧಿಕಾರಿಗಳಿಗೆ ‘ಸಂಭಾಷಣೆ ರೆಕಾರ್ಡ್’ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 22:39 IST
Last Updated 13 ಮಾರ್ಚ್ 2020, 22:39 IST
 ವೆಂಕಟೇಶ್‌ ಪ್ರಸನ್ನ ಹಾಗೂ ರವಿ ಪೂಜಾರಿ
ವೆಂಕಟೇಶ್‌ ಪ್ರಸನ್ನ ಹಾಗೂ ರವಿ ಪೂಜಾರಿ   

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಕಮಿಷನರ್‌ (ಎಸಿಪಿ) ವೆಂಕಟೇಶ್‌ ಪ್ರಸನ್ನ ಅವರ ವಿರುದ್ಧದ ಇಲಾಖಾ ತನಿಖೆ ಚುರುಕುಗೊಂಡಿದ್ದು, ಅವರು ಭಾಗಿಯಾಗಿದ್ದಾರೆ ಎನ್ನಲಾದ ಹಳೇ ಪ್ರಕರಣಗಳೂ ಮರುಜೀವ ಪಡೆದುಕೊಳ್ಳುತ್ತಿವೆ.

ಭಯೋತ್ಪಾದನೆ ಹಾಗೂ ರೌಡಿ ಚಟುವಟಿಕೆಗಳ ನಿಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ, ರವಿ ಪೂಜಾರಿ ಹೇಳಿಕೆಯಿಂದಾಗಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ತನಿಖಾಧಿಕಾರಿ ನೀಡಿರುವ ವರದಿ ಆಧರಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿರುವ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಎಸಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.

ಎಸಿಪಿ ವಿರುದ್ಧ ಈಗಾಗಲೇ ಇಲಾಖಾ ವಿಚಾರಣೆ ಆರಂಭವಾಗಿದ್ದು, ಇನ್ನೆರಡು ದಿನದಲ್ಲಿ ಅದು ಅಂತ್ಯವಾಗಲಿದೆ. ಅದರ ವರದಿ ಆಧರಿಸಿ ಪ್ರವೀಣ್ ಸೂದ್ ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ವೆಂಕಟೇಶ್ ಪ್ರಸನ್ನ ವಿರುದ್ಧದ ಆರೋಪಕ್ಕೆ ಪುರಾವೆಗಳು ಒಂದೊಂದಾಗಿ ಸಿಗುತ್ತಿದೆ. ಕೆಲ ಹಳೇ ಪ್ರಕರಣದಲ್ಲೂ ಅವರು ಭಾಗಿಯಾಗಿರುವ ಮಾಹಿತಿ ಇದೆ. ಇವೆಲ್ಲವೂ ಸಾಬೀತಾದರೆ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗುವ ಹಾಗೂ ಬಂಧನಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಸಂಭಾಷಣೆ ರೆಕಾರ್ಡ್’ ಬ್ಲ್ಯಾಕ್‌ಮೇಲ್: ‘ಕೆಲ ಮಹತ್ವದ ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದ ವೆಂಕಟೇಶ್‌ ಪ್ರಸನ್ನ, ಆ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅದನ್ನೇ ಮುಂದಿಟ್ಟುಕೊಂಡು ಅಧಿಕಾರಿ
ಗಳನ್ನೇ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂಬ ಗಂಭೀರ ಆರೋಪವೂ ವೆಂಕಟೇಶ್ ಪ್ರಸನ್ನ ಅವರ ಮೇಲಿದೆ’ ಎಂದು ಮೂಲಗಳು ತಿಳಿಸಿವೆ.

‘ಆ್ಯಂಬಿಡೆಂಟ್ ಕಂಪನಿ ವಿರುದ್ಧದ ಪ್ರಕರಣದಲ್ಲೂ ಆರೋಪಿಯೊಬ್ಬರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ವೆಂಕಟೇಶ್ ಪ್ರಸನ್ನ ಅವರ ಮೇಲಿತ್ತು. ಅವಾಗಲೂ ಅವರನ್ನು ಸಿಸಿಬಿಯಿಂದ ಅತಿ ಗಣ್ಯ ವ್ಯಕ್ತಿಗಳ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಬಾರಿಯೂ ಅವರನ್ನು ಅದೇ ವಿಭಾಗಕ್ಕೆ ವರ್ಗಾಯಿಸಲಾಗಿದೆ.’

‘ವರ್ಗಾವಣೆಯನ್ನು ವಿರೋಧಿಸುತ್ತಿದ್ದ ವೆಂಕಟೇಶ್ ಪ್ರಸನ್ನ, ಕೆಲಸಕ್ಕೆ ರಾಜೀನಾಮೆ ನೀಡಿ ಸಂಭಾಷಣೆ ರೆಕಾರ್ಡ್‌ಗಳನ್ನು ಬಹಿರಂಗಗೊಳಿಸುವುದಾಗಿ ಕೆಲ ಹಿರಿಯ ಅಧಿಕಾರಿಗಳನ್ನು ಬೆದರಿಸಿದ್ದರು. ಅಂದಿನಿಂದಲೇ ಎಸಿಪಿ ವಿರುದ್ಧ ಅಧಿಕಾರಿಗಳು ಕಣ್ಣಿಟ್ಟಿ
ದ್ದರು. ಅದೇ ಸಮಯಕ್ಕೆ ಸಿಕ್ಕಿಬಿದ್ದ ರವಿ ಪೂಜಾರಿ ಸಹ ವೆಂಕಟೇಶ್‌ ಪ್ರಸನ್ನ ಹೆಸರು ಹೇಳಿರುವುದು ಹಿರಿಯ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಮೂಲಗಳು ಹೇಳಿವೆ.

ಎಸಿಪಿ ವಿರುದ್ಧ ಷಡ್ಯಂತ್ರ?
ರೌಡಿಗಳನ್ನು ಹೆಡೆಮುರಿ ಕಟ್ಟುವ ಹಾಗೂ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳ ಮೂಲಕವೇ ಮುಗಿಸುವ ಯತ್ನಗಳು ಮೊದಲಿನಿಂದಲೂ ನಡೆಯುತ್ತ ಬಂದಿದೆ. ಈಗ ಎಸಿಪಿ ವೆಂಕಟೇಶ್‌ ಪ್ರಸನ್ನ ಅವರ ವಿರುದ್ಧವೂ ಅಂಥದ್ದೇ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿದೆ.

ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಎಡಿಜಿಪಿ ಅಲೋಕ್‌ಕುಮಾರ್ ಮೇಲೆ ಒಂದಂಕಿ ಲಾಟರಿ ಪ್ರಕರಣದ ಆರೋಪಿ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಮಾಡಲಾಗಿತ್ತು. ಇದು ಸುಳ್ಳಉ ಆರೋಪವೆಂಬುದು ಸಿಬಿಐ ತನಿಖೆಯಿಂದ ಇತ್ತೀಚೆಗಷ್ಟೇ ಗೊತ್ತಾಗಿದೆ.

ಮುಂಬೈನಲ್ಲಿ ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಎನ್‌ಕೌಂಟರ್‌ ದಯಾನಾಯಕ್‌ ಅವರ ಮೇಲೂ ಭೂಗತ ದೊರೆಗಳಿಂದ ಹಣ ಪಡೆದ ಆರೋಪವಿತ್ತು. ಅದು ಅವರ ವಿರುದ್ಧ ಷಡ್ಯಂತ್ರ ಎಂಬುದನ್ನು ತನಿಖೆಯೇ ಬಹಿರಂಗ ಮಾಡಿತು. ಇದೀಗ ರವಿ ಪೂಜಾರಿ ಮುಂದಿಟ್ಟುಕೊಂಡು ವೆಂಕಟೇಶ್ ಪ್ರಸನ್ನ ಅವರ ವಿರುದ್ಧವೂ ಆರೋಪ ಮಾಡಲಾಗುತ್ತಿದೆ. ತನಿಖೆಯಿಂದಲೇ ಇದರ ಸತ್ಯಾಂಶ ತಿಳಿಯಬೇಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.