ADVERTISEMENT

ಬೆಂಗಳೂರು ಯೋಜನಾಬದ್ಧ ಅಭಿವೃದ್ಧಿಗೆ ಕ್ರಮ: ಸಿ.ಎಂ

ನಗರದ ಬಗ್ಗೆ ಅಪಪ್ರಚಾರ, ಅದುವೇ ನಮಗೆ ಸಕಾರಾತ್ಮಕ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 19:30 IST
Last Updated 29 ಜನವರಿ 2023, 19:30 IST
‘ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮೇಲ್ಸೇತುವೆ’ಯ ಉದ್ಘಾಟನಾ ಫಲಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಅನಾವರಣಗೊಳಿಸಿದರು. ಸಚಿವರಾದ ವಿ. ಸೋಮಣ್ಣ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ ಸುರೇಶ್‌ಕುಮಾರ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಇದ್ದರು
‘ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮೇಲ್ಸೇತುವೆ’ಯ ಉದ್ಘಾಟನಾ ಫಲಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಅನಾವರಣಗೊಳಿಸಿದರು. ಸಚಿವರಾದ ವಿ. ಸೋಮಣ್ಣ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ ಸುರೇಶ್‌ಕುಮಾರ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಇದ್ದರು   

ಬೆಂಗಳೂರು: ‘ಬೆಂಗಳೂರು ಇನ್ನು ಮುಂದೆ ವ್ಯವಸ್ಥಿತವಾಗಿ ಬೆಳೆಯಲು ಸರ್ಕಾರ ಯೋಜನೆಯೊಂದನ್ನು ಜಾರಿಗೆ ತರಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ರಾಜ್ಯ ಸರ್ಕಾರ ನಗರದ ಅಭಿವೃದ್ಧಿಗೆ ಬದ್ಧವಾಗಿದೆ. ಅದು ಯೋಜನಾಬದ್ಧವಾಗಿಸಲು ಎಲ್ಲ ರೀತಿಯ ಕ್ರಮ ಮತ್ತು ಯೋಜನೆಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಪ್ರಕಟಿಸಲಾಗುತ್ತದೆ’ ಎಂದರು.

ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ. ರಾಜ್‌ಕುಮಾರ್‌ ವಾರ್ಡ್‌ನ ಮಾಗಡಿ ರಸ್ತೆ, ಪೊಲೀಸ್‌ ಕಾಲೊನಿಯಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ, ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣ ಸೇರಿದಂತೆ ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಮುಂಬೈ, ಚೆನ್ನೈನಲ್ಲೂ ಮಳೆ ಬಂದಾಗ ಸಾಕಷ್ಟು ಪ್ರದೇಶ ಮುಳುಗಡೆಯಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಶತಮಾನದ ಅತಿದೊಡ್ಡ ಮಳೆಯಾಗಿ ಸಮಸ್ಯೆಯಾದಾಗ ನಗರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ರಾಜಕಾಲುವೆಗಳನ್ನು ದಶಕಗಳಿಂದ ಒತ್ತುವರಿ ಮಾಡಿಕೊಂಡು, ಇದೀಗ ಅವರೇ ಬೆಂಗಳೂರು ಮುಳುಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸುಮಾರು ₹2 ಸಾವಿರ ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಿಸುತ್ತಿದ್ದೇವೆ’ ಎಂದರು.

‘ರಾಜಕಾಲುವೆಗೆ ನೀಡಿರುವ ಅನುದಾನ ಹೊರತುಪಡಿಸಿ, ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಮೂರೂವರೆ ವರ್ಷದಲ್ಲಿ ಸುಮಾರು ₹10 ಸಾವಿರ ಕೋಟಿಯನ್ನು ನಗರ ಅಭಿವೃದ್ಧಿಗೆ ಕೊಟ್ಟಿದ್ದೇವೆ. ನಗರವು ಅಭಿವೃದ್ಧಿ ಪಥದಲ್ಲಿಯೇ ಸಾಗಿದೆ’ ಎಂದರು.

‘ನಕಾರಾತ್ಮಕ ಮಾತನಾಡುವ ಎಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇವೆ. ಬನ್ನಿ, ಬೆಂಗಳೂರನ್ನು ನೋಡಿ ಹೇಗೆ ಅಭಿವೃದ್ಧಿಯಾಗಿದೆ’ ಎಂದರು.

ಬೆಂಗಳೂರಿನ ಪಶ್ಚಿಮ‌ ವಿಭಾಗದ ನೂತನ ಡಿಸಿಪಿ ಕಚೇರಿಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಗೋಪಾಲಯ್ಯ, ರಾಜ್ಯಸಭೆ ಸದಸ್ಯ ಜಗ್ಗೇಶ್‌, ಶಾಸಕರಾದ ಸುರೇಶ್ ಕುಮಾರ್, ಸತೀಶ್ ರೆಡ್ಡಿ, ಎಸ್‌. ಆರ್. ವಿಶ್ವನಾಥ್‌, ಜಮೀರ್ ಅಹಮದ್, ಅ. ದೇವೇಗೌಡ, ಬಿಬಿಎಂಪಿ ಆಡಳಿತಗಾರ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.