ADVERTISEMENT

ಹೊಸ ವರ್ಷಾಚರಣೆ: ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಶಿಸ್ತು ಕ್ರಮ

ಸ್ವಚ್ಛತೆ ಕಾಪಾಡಿ: ಬಿಬಿಎಂಪಿ ಮನವಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 23:20 IST
Last Updated 30 ಡಿಸೆಂಬರ್ 2019, 23:20 IST
   

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶಾಂತಿ ಹಾಗೂ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ.

ಹೋಟೆಲ್, ಪಬ್ ಹಾಗೂ ರೆಸ್ಟೋರಂಟ್‌ಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ರಸ್ತೆಗಳ ಮೇಲೆ ಬಿಸಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಹೊಸ ವರ್ಷದ ಸಂಭ್ರಮ ಆಚರಣೆ ನಡೆಯುವ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ.ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಪ್ರಹರಿ ವಾಹನಗಳನ್ನು ನಿಯೋಜಿಸಲಾಗಿದೆ. ಅವಘಡಗಳು ಸಂಭವಿಸಿದರೆ ತುರ್ತಾಗಿ ಸ್ಪಂದಿಸಲು ಆಂಬುಲೆನ್ಸ್, ಅಗತ್ಯ ವೈದ್ಯರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿ ಶಾಮಕ ಸೇವೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಲು ಪಾಲಿಕೆ ವತಿಯಿಂದ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇವುಗಳನ್ನು ಬಳಸಬೇಕು ಎಂದು ಬಿಬಿಎಂಪಿ ಕೋರಿದೆ.

ADVERTISEMENT

ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಜನರು ಸುರಕ್ಷಿತವಾಗಿ ಮನೆಗೆ ತಲುಪಲು ನೆರವಾಗುವ ಸಲುವಾಗಿ ‘ನಮ್ಮ ಮೆಟ್ರೊ’ ಸಂಚಾರದ ಅವಧಿಯನ್ನು ಮಂಗಳವಾರ ಮಧ್ಯರಾತ್ರಿಯ ಬಳಿಕವೂ (ಬುಧವಾರ ನಸುಕಿನ ಜಾವ 2 ಗಂಟೆಯವರೆಗೆ) ವಿಸ್ತರಿಸಲಾಗಿದೆ. ಬಿಎಂಟಿಸಿಯ ಸಾರಥಿ ತಂಡಗಳು ತಡರಾತ್ರಿವರೆಗೆ ಸೇವೆ ನೀಡಲಿದ್ದು, ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಿವೆ.

ತುರ್ತು ಪರಿಸ್ಥಿತಿಯಲ್ಲಿ ನಿಯಂತ್ರಣ ಕೊಠಡಿಗಳಿಗೆ (ಬಿಬಿಎಂಪಿ:080-22660000; ಪೊಲೀಸ್:100; ಆಂಬುಲೆನ್ಸ್:108) ಕರೆ ಮಾಡಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.