ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳು ಡಾ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಗೂ ಬಾವುಟಗಳನ್ನು ಪ್ರದರ್ಶಿಸಿದರು
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನಟ, ದಿವಂಗತ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿ ಅವರ ಅಭಿಮಾನಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಗರದ ಹಲವು ಪ್ರದೇಶಗಳು ಹಾಗೂ ಹೊರ ಜಿಲ್ಲೆಗಳ ಅಭಿಮಾನಿಗಳು ಪಾಲ್ಗೊಂಡಿದ್ದರು. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಗೂ ಕನ್ನಡ ಬಾವುಟ ಹಿಡಿದು ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದದರು.
ಪ್ರತಿಭಟನೆ ಅಂಗವಾಗಿ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲಿನ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲೆಲ್ಲ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಅಭಿಮಾನಿಗಳು, ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
‘ಮೇರುನಟನಿಗೆ ಪುಣ್ಯಭೂಮಿ ಏಕಿಲ್ಲ ? ತಾರತಮ್ಯ ಏಕೆ ? ಹಾಗೂ ಪುಣ್ಯಭೂಮಿ ವಿಚಾರದಲ್ಲಿ ಸರ್ಕಾರದ ಮೌನವೇಕೆ ? ಎಂಬಿತ್ಯಾದಿ ಘೋಷಣೆಯುಳ್ಳ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.
ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ್ ಮಾತನಾಡಿ. ‘ಕನ್ನಡ ಚಿತ್ರರಂಗದ ಮೇರುನಟ ವಿಷ್ಣುವರ್ಧನ್. ಅಭಿಮಾನ್ ಸ್ಟುಡಿಯೊದಲ್ಲಿ ಅವರ ಪುಣ್ಯಭೂಮಿ ಇದೆ. ಅಭಿಮಾನಿಗಳು ಪುಣ್ಯಭೂಮಿಗೆ ಹೋಗಲು ಸ್ಟುಡಿಯೊ ಮಾಲೀಕರು ನಿರ್ಬಂಧ ವಿಧಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆ ಆಚರಿಸಲು ತೊಂದರೆ ಉಂಟಾಗುತ್ತಿದೆ’ ಎಂದು ದೂರಿದರು.
‘ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿಯೇ ವಿಷ್ಣುವರ್ಧನ್ ಇರುವುದಾಗಿ ಅಭಿಮಾನಿಗಳು ನಂಬಿದ್ದಾರೆ. ಜನ್ಮದಿನ ಮತ್ತು ಪುಣ್ಯಸ್ಮರಣೆ ದಿನದಂದು ಸಾವಿರಾರು ಮಂದಿ ಸ್ಟುಡಿಯೊಗೆ ಬಂದು ಹೋಗುತ್ತಿದ್ದಾರೆ. ಅಂತ್ಯಸಂಸ್ಕಾರವಾದ ಸ್ಥಳದಲ್ಲಿಯೇ ಪುಣ್ಯಭೂಮಿ ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯ. ನಮ್ಮ ಈ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದರು.
‘ಪುಣ್ಯಭೂಮಿ ಅಭಿವೃದ್ಧಿಗಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಪುಣ್ಯಭೂಮಿ ಅಭಿವೃದ್ಧಿಗೆ ಹಣದ ತೊಂದರೆ ಇದ್ದರೆ, ಅಭಿಮಾನಿಗಳೇ ಹೊಂದಿಸಿ ನೀಡಲು ಸಿದ್ಧರಿದ್ದಾರೆ’ ಎಂದು ತಿಳಿಸಿದರು.
ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು - ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ –– ಕಿಚ್ಚ ಸುದೀಪ್, ನಟ
ನಟ ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದನ್ನು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ. ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ- ಡಾಲಿ ಧನಂಜಯ, ನಟ
ನಟ ಡಾ. ವಿಷ್ಣು ಸರ್ ಸಮಾಧಿಗಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿರುವುದು ಬೇಸರದ ವಿಷಯ. ಇದು ಬರೀ ಸಮಾಧಿಯ ವಿಷಯವಲ್ಲ. ಎಲ್ಲ ಅಭಿಮಾನಿಗಳಿಗಾಗುವ ನೋವು. ಬೇಗ ಸರ್ಕಾರ ಇದನ್ನು ಬಗೆಹರಿಸಲಿ –– ನೀನಾಸಂ ಸತೀಶ್, ನಟ
ನಟ ಕನ್ನಡದ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರಗೊಂಡ ಸ್ಥಳ ಪುಣ್ಯಭೂಮಿ ಆಗಬೇಕೆಂಬುದು ಕನ್ನಡಿಗರ ಅಪೇಕ್ಷೆಯ ಸಂಕೇತವಾಗಿದೆ. ಸರ್ಕಾರ ಸಕಾರಾತ್ಮಕವಾಗಿ ಮನಸ್ಸು ಮಾಡಿದರೆ ಈ ಬೇಡಿಕೆ ಈಡೇರಿಸುವುದು ದೊಡ್ಡ ವಿಷಯವೇನಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸುತ್ತೇನೆ –– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.