ADVERTISEMENT

ನಟಿಗೆ ಕಿರುಕುಳ: ಆರೋಪಿ ಅರವಿಂದ್ ವೆಂಕಟೇಶ್‌ರೆಡ್ಡಿ ಬಂಧನ, ಬಿಡುಗಡೆ

ಎ.ವಿ.ಆರ್‌ ಗ್ರೂಪ್‌ನ ಎಂ.ಡಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 0:26 IST
Last Updated 16 ನವೆಂಬರ್ 2025, 0:26 IST
<div class="paragraphs"><p>ಅರವಿಂದ್ ವೆಂಕಟೇಶ್‌ರೆಡ್ಡಿ</p></div>

ಅರವಿಂದ್ ವೆಂಕಟೇಶ್‌ರೆಡ್ಡಿ

   

ಬೆಂಗಳೂರು: ನಟಿಗೆ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಎ.ವಿ.ಆರ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವೆಂಕಟೇಶ್‌ರೆಡ್ಡಿ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಅಕ್ಟೋಬರ್‌ 10ರಂದು ರಾಜರಾಜೇಶ್ವರಿನಗರ ಠಾಣೆಗೆ ನಟಿ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆ 78(2), 79, 352, 351(2), ರೆ/ವಿ 3(5) ಅಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಗೋವಿಂದರಾಜನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ADVERTISEMENT

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶನಿವಾರ ಮುಂಜಾನೆ ಆರೋಪಿಯನ್ನು ಬಂಧಿಸಿ ಮೊಬೈಲ್‌ ಫೋನ್‌ ವಶಕ್ಕೆ ಪಡೆದುಕೊಂಡಿದ್ದರು. ಶನಿವಾರ ಸಂಜೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದರಿಂದ ಆರೋಪಿ ಬಿಡುಗಡೆ ಆಗಿದ್ದಾರೆ.

‘ಶ್ರೀಲಂಕಾಕ್ಕೆ ತೆರಳಿದ್ದ ಆರೋಪಿ, ಬೆಂಗಳೂರಿಗೆ ಬರುವ ಮಾಹಿತಿ ಸಿಕ್ಕಿತ್ತು. ಶನಿವಾರ ಮುಂಜಾನೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ರಿಯಲ್ ಎಸ್ಟೇಟ್ ಉದ್ಯಮಿ, ಚಲನಚಿತ್ರ ನಿರ್ಮಾಪಕರೂ ಆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ಅವರು ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು. ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ನಡೆದ ಟೂರ್ನಮೆಂಟ್‌ನ ಪ್ರಮುಖ ಪ್ರಾಯೋಜಕರಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘2021ರಲ್ಲಿ ಆರೋಪಿಗೆ ನಟಿಯ ಪರಿಚಯವಾಗಿತ್ತು. ಆರಂಭದಲ್ಲಿ ಸಹ ಜೀವನ ನಡೆಸುತ್ತಿದ್ದರು. ಆರೋಪಿ ಮದ್ಯ ಸೇವಿಸಿ ಬರುತ್ತಿದ್ದರಿಂದ ದೂರುದಾರೆ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದರು. ಈ ಬೆಳವಣಿಗೆಯು ಅರವಿಂದ್ ವೆಂಕಟೇಶ್‌ ರೆಡ್ಡಿಗೆ ಸಿಟ್ಟು ತರಿಸಿತ್ತು. ದೂರುದಾರೆಯನ್ನು ಹಿಂಬಾಲಿಸುವುದು, ಲೊಕೇಷನ್‌ ಪರಿಶೀಲನೆ ಮಾಡುವುದು, ನಟಿಯ ಫೋಟೊಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ದೂರುದಾರೆಯ ತಂದೆ–ತಾಯಿ ಮನೆಗೆ ತಮ್ಮ ಕಡೆಯ ಹುಡುಗರನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಿದ್ದರು. ಅಲ್ಲದೇ ಸಂಬಂಧ ಮುಂದುವರಿಸುವಂತೆ ಬಲವಂತೆ ಮಾಡುತ್ತಿದ್ದರು’ ಎಂದು ನಟಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.

ಆಸ್ಪತ್ರೆಯಲ್ಲೂ ಹಲ್ಲೆ: ‘ಅರವಿಂದ್ ಅವರ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಗೂ ಬಂದಿದ್ದ ಆರೋಪಿ ಹಲ್ಲೆ ನಡೆಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಪರಿಚಯ

‘ಅರವಿಂದ್ ಅವರು 2021ರಲ್ಲಿ ಕರೆ ಮಾಡಿ ಶ್ರೀಲಂಕಾದಲ್ಲಿ ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದ್ದರು. ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಳ್ಳಲು ಹೋಗಿದ್ದೆ. ಆಗ ಪರಿಚಯವಾಗಿ ಮಾತುಕತೆ ನಡೆಸುತ್ತಿದ್ದೆವು’ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.