ಹೈಕೋರ್ಟ್
ಬೆಂಗಳೂರು: ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿ ಬರುವ 18 ಜಾತಿಗಳನ್ನು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಮಾದಿಗ ಗುಂಪಿನಲ್ಲಿ ಸೇರಿಸಿರುವುದು ಅವೈಜ್ಞಾನಿಕವಾಗಿದೆ ಎಂದು ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್ ತಿಳಿಸಿದೆ.
ಪರಿಷತ್‌ನ ಪ್ರಧಾನ ಸಂಚಾಲಕ ಬಿ. ಗುರುರಾಜ್ ನೇತೃತ್ವದ ನಿಯೋಗವು, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗಕ್ಕೆ ಈ ಕುರಿತು ಮನವಿ ಸಲ್ಲಿಸಿದೆ. ‘ಸದಾಶಿವ ಆಯೋಗದ ವರದಿ ಹಾಗೂ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿರುವ ಜಾತಿಗಳನ್ನು ಮಾದಿಗ ಗುಂಪಿಗೆ ಸೇರಿಸಿದರೆ ಈ ಸಮುದಾಯಗಳಿಗೆ ಅನ್ಯಾಯಯವಾಗುತ್ತದೆ’ ಎಂದು ಪರಿಷತ್ ಆಕ್ಷೇಪಿಸಿದೆ.
ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿ ಬರುವ ಚಮಾರ್, ಚಾಂಬರ್, ಚಮಾಡಿಯ, ಢೋರ್, ಡೋಹರ, ಹರಳಯ್ಯ, ಮಚಿಗಾರ್, ಮೋಚಿಗಾರ್, ಮೋಚಿ, ಮುಚ್ಚಿಗ, ತೆಲುಗುಮೋಚಿ, ಕಾಮಾಟಿ ಮೋಚಿ, ರೋಹಿದಾಸ್, ಕಕ್ಕಯ್ಯ, ಕಂಕಯ್ಯ, ಸಮಗಾರ, ಚಮಗಾರ್, ಸಮಗಾರ್ ಜಾತಿಗಳನ್ನು ಸದಾಶಿವ ಆಯೋಗವು ಬಲಾಢ್ಯ ಮಾದಿಗ ಗುಂಪಿಗೆ ಸೇರಿಸಿರುವುದು ಅವೈಜ್ಞಾನಿಕ ಎಂದು ದೂರಿದೆ.
ತ್ರಿಮಸ್ಥ ಚರ್ಮಕಾರರು ಮಾದಿಗರೂ ಅಲ್ಲ, ಎಡಗೈಯೂ ಅಲ್ಲ. ಮಾದಿಗ ಸಂಬಂಧಿತ ಜಾತಿಗಳೂ ಅಲ್ಲ. ಆದರೆ, ತ್ರಿಮತಸ್ಥರ ಪಾಲಿನ ಉನ್ನತ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಅವಕಾಶಗಳನ್ನು ತಪ್ಪಿಸಿ, ಮಾದಿಗ ಸಮುದಾಯದವರೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದೆ.
‘ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು ಡೋಹರ ಜಾತಿಯನ್ನು ತ್ರಿಮತಸ್ಥ ಚರ್ಮಕಾರರಿಂದ ಬೇರ್ಪಡಿಸಿ ಅಲೆಮಾರಿ ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಿ ಅನ್ಯಾಯ ಮಾಡಿದೆ. ನಾವು ಒಂದೇ ಕುಲಕಸುಬಿನ, ಒಂದೇ ಕುಟುಂಬದ ಸದಸ್ಯರಾಗಿದ್ದೇವೆ. ಡೋಹರ ಜಾತಿಯನ್ನು ಮರಳಿ ತ್ರಿಮತಸ್ಥ ಚರ್ಮಕಾರರ ಗುಂಪಿಗೆ ಸೇರಿಸಬೇಕು’ ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.