
ಕೆಂಗೇರಿ: ಪಾರಂಪರಿಕ ಆಚರಣೆಗಳು ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ಸಾತ್ವಿಕ ಗುಣವನ್ನು ಹೊಂದಿವೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಹಾಗೂ ಒಕ್ಕಲಿಗ ಯುವ ಬ್ರಿಗೇಡ್ ಆಶ್ರಯದಲ್ಲಿ
ಆಯೋಜಿಸಿದ್ದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಅಭಿನಂದನಾ ಗ್ರಂಥ ಲೋಕಾರ್ಪಣೆ, ಸಾವಯವ ಸಂತೆ, ಉಚಿತ ಆರೋಗ್ಯ ಶಿಬಿರ, ಮಲೆನಾಡು ಗಿಡ್ಡ ರಾಸುಗಳ ಉಚಿತ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಜನ್ಮ ಭೋಗಕ್ಕಲ್ಲ ಯೋಗಕ್ಕೆ ಎಂಬ ಸತ್ಯ ಅರಿಯಬೇಕು. ಬೌದ್ಧಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಪ್ರೀತಿ, ತ್ಯಾಗ ಮಮಕಾರವನ್ನು ಪ್ರತಿಪಾದಿಸದ ಯಾವುದೇ ಗ್ರಂಥವು ಧರ್ಮ ಗ್ರಂಥವಾಗಲು ಅರ್ಹತೆ ಹೊಂದುವುದಿಲ್ಲ. ಶಿವನು ವೇದ ಪ್ರಿಯನೂ ಅಲ್ಲ. ನಾದ ಪ್ರಿಯನೂ ಅಲ್ಲ. ಅವನು ಭಕ್ತಿ ಪ್ರಿಯ. ಭಕ್ತಿಯೇ ಶಿವನನ್ನು ತಲುಪಲು ಇರುವ ಏಕೈಕ ಮಾರ್ಗ ಎಂದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ದೇಶ ಹಾಗೂ ನಾಡಿನ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಮಠಗಳ ಪಾತ್ರ ಹಿರಿದಾಗಿದೆ. ಸಾರ್ವಜನಿಕರಿಗೆ ಸೇವೆ, ಸೌಲಭ್ಯ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ಶ್ಲಾಘಿಸಿದರು.
‘ರಾಸಾಯನಿಕ ರಹಿತ ಆಹಾರ ಧಾನ್ಯಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸಾವಯವ ಸಂತೆ, ವಿಜ್ಞಾನ ತಂತ್ರಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಕೈಲಾಸಾಶ್ರಮ ಮಹಾ ಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಸ್.ಟಿ. ಸೋಮಶೇಖರ್, ಅಂಕೇಗೌಡ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.