ಬೆಂಗಳೂರು: ಪಾರ್ಟಿ ವೇಳೆ ನಡೆದ ಗಲಾಟೆಯಲ್ಲಿ ಹಲ್ಲೆ ನಡೆಸಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಅಹಮದ್ ಅಜೀತ್ (28) ಎಂಬಾತನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವೀರಮಣಿ ಹಾಗೂ ಪವನ್ ಬಂಧಿತ ಆರೋಪಿಗಳು.
ವೀರಮಣಿ, ಪವನ್ ಹಾಗೂ ಅಜೀಜ್ ಸ್ನೇಹಿತರು. ಮೂವರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮೇ 8ರಂದು ದಾಸರಹಳ್ಳಿ ಮುಖ್ಯರಸ್ತೆಯ ಪಕ್ಕದ ಖಾಲಿ ನಿವೇಶನದಲ್ಲಿ ಮದ್ಯದ ಪಾರ್ಟಿ ನಡೆಸಿದ್ದರು. ಆಗ ಗಲಾಟೆ ನಡೆದು ಪವನ್ ಮೇಲೆ ಅಜೀಜ್ ಹಲ್ಲೆ ನಡೆಸಿದ್ದ. ಇದರಿಂದ ಸಿಟ್ಟಿಗೆದ್ದ ಪವನ್ ಹಾಗೂ ವೀರಮಣಿ, ಮರದ ತುಂಡುಗಳಿಂದ ಅಜೀಜ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಜೀಜ್‌ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಅಪಘಾತದಲ್ಲಿ ಅಜೀಜ್ ಗಾಯಗೊಂಡಿರುವುದಾಗಿ ವೈದ್ಯರ ಬಳಿ ಹೇಳಿದ್ದರು. ಬಳಿಕ ಅಜೀಜ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅಜೀಜ್ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
‘ಅಪಘಾತದಿಂದ ಅಜೀಜ್‌ನ ಸಾವು ಸಂಭವಿಸಿಲ್ಲ ಎಂಬುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಅದನ್ನು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ನಡೆಸಿರುವುದು ಬಯಲಾಗಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.