ADVERTISEMENT

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಮೇಲ್ಮನವಿ ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 15:32 IST
Last Updated 8 ಆಗಸ್ಟ್ 2023, 15:32 IST
high court
high court   

ಬೆಂಗಳೂರು: ‘ಚಿತ್ರದುರ್ಗದ ‘ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ’ಕ್ಕೆ (ಎಸ್‌ಜೆಎಂ) ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿರುವ ಆದೇಶವು; ಈ ಸಂಬಂಧದ ಮೇಲ್ಮನವಿ ವಿಚಾರಣೆ ಮುಕ್ತಾಯವಾಗುವತನಕ ಮುಂದುವರಿಯಲಿದೆ‘ ಎಂದು ಹೈಕೋರ್ಟ್‌ ಆದೇಶಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಒಟ್ಟು ಏಳು ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಿಚಾರಣೆ ವೇಳೆ ಮೇಲ್ಮನವಿದಾರರೂ ಆದ ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್‌ ಪರ ಹಿರಿಯ ವಕೀಲ ಕೆ.ಜಿ.ರಾಘವನ್‌ ಸುದೀರ್ಘ ವಾದ ಮಂಡಿಸಿ, ‘ಏಕಸದಸ್ಯ ನ್ಯಾಯಪೀಠ ಗಮನಿಸದೇ ಇರುವ ಅಂಶಗಳನ್ನು ಪರಿಗಣಿಸಬೇಕು‘ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ದಿನದ ಕಲಾಪದ ಅವಧಿ ಮುಕ್ತಾಯವಾದ ಕಾರಣ ನ್ಯಾಯಪೀಠವು ವಿಚಾರಣೆಯನ್ನು ಬುಧವಾರ (ಆ.09) ಮಧ್ಯಾಹ್ನ 2.30ಕ್ಕೆ ನಿಗದಿಗೊಳಿಸಿ ಮುಂದೂಡಿತು.

ADVERTISEMENT

ಪ್ರಕರಣದಲ್ಲಿ ಮೇಲ್ಮನವಿದಾರ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಕೆ.ಎಸ್. ನವೀನ್‌ ಪರ ಮತ್ತೊಬ್ಬ ಹಿರಿಯ ವಕೀಲ ಗಂಗಾಧರ ಗುರುಮಠ, ಮಾಜಿ ಮಂತ್ರಿ ಎಚ್.ಏಕಾಂತಯ್ಯ, ಮುರುಘಾ ಮಠದ ಪರ ಹಿರಿಯ ವಕೀಲರಾದ ಉದಯ ಹೊಳ್ಳ ಹಾಗೂ ಎಸ್.ಜಯಕುಮಾರ್ ಪಾಟೀಲ್ ಹಾಜರಿದ್ದರು.

ಮಧ್ಯಂತರ ಆದೇಶವೇನಿದೆ?: ‘ಜಿಲ್ಲಾ ನ್ಯಾಯಾಧೀಶರು ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳಬಾರದು. ಮಠ ಮತ್ತು ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಮಾತ್ರವೇ ನಿಭಾಯಿಸಬೇಕು. ಈ ದಿಸೆಯಲ್ಲಿ ಯಾವುದಾದರೂ ನೆರವು ಬೇಕಾದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಯನ್ನು ಲಿಖಿತವಾಗಿ ಕೋರಬಹುದು. ಅದರನ್ವಯ ಜಿಲ್ಲಾಧಿಕಾರಿ ತಕ್ಷಣವೇ ಅಗತ್ಯ ನೆರವು ಕಲ್ಪಿಸಬೇಕು’ ಎಂದು ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಅಂತೆಯೇ, ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಕಳೆದ ಜುಲೈ 4ರಂದು ಮಠದ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣವೇನು?: ‘ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು 2022ರ ಸೆಪ್ಟೆಂಬರ್ 1ರಂದು ಅವರನ್ನು ಬಂಧಿಸಿದ್ದು ಅಂದಿನಿಂದಲೂ ಅವರು ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು.

ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು, ಹೈಕೋರ್ಟ್‌ ಮೆಟ್ಟಿಲೇರಿದ್ದರು. ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆಡಳಿತಾಧಿಕಾರಿ ನೇಮಕವನ್ನು ರದ್ದುಪಡಿಸಿ, ‘ಮಠಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅಂತೆಯೇ, ‘ಶರಣರು ಜೈಲಿನಲ್ಲಿರುವ ಕಾರಣ, ಮಠ, ವಿದ್ಯಾಪೀಠ ಹಾಗೂ ಶೈಕ್ಷಣಿಕ ಸಂಸ್ಥೆಗಳ ಆಡಳಿತ ನಿರ್ವಹಣೆಗಾಗಿ ಮಠದ ಭಕ್ತರು, ವೀರಶೈವ, ಲಿಂಗಾಯತ ಸಮುದಾಯದ ಮುಖಂಡರು ಆರು ವಾರಗಳ ಒಳಗಾಗಿ ಮಧ್ಯಂತರ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ಮುಂದುವರಿಸಲಾಗುತ್ತಿದೆ’ ಎಂದು ನಿರ್ದೇಶಿಸಿತ್ತು. ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.