ADVERTISEMENT

ಬೆಂಗಳೂರು: ಮಿಲಿಟರಿ ಸ್ಕೂಲ್‌ಗೆ ವಿದ್ಯಾರ್ಥಿನಿಯರ ಪ್ರವೇಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:56 IST
Last Updated 6 ಮಾರ್ಚ್ 2023, 20:56 IST
ರಾಷ್ಟ್ರೀಯ ಮಿಲಿಟರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯರು ಆಯುಧಗಳ ಬಗ್ಗೆ ಮಾಹಿತಿ ಪಡೆದರು       –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಮಿಲಿಟರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯರು ಆಯುಧಗಳ ಬಗ್ಗೆ ಮಾಹಿತಿ ಪಡೆದರು       –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ (ಆರ್‌ಎಂಎಸ್‌) ಅಮೃತ ಮಹೋತ್ಸವದ ಅಂಗವಾಗಿ 2022–23 ರ ಶೈಕ್ಷಣಿಕ ಸಾಲಿನಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಲಾಗಿದೆ’ ಎಂದು ಶಾಲೆಯ ಪ್ರಾಂಶುಪಾಲ ಲೆಫ್ಟಿನೆಂಟ್‌ ಕರ್ನಲ್‌ ದೀಪಂಕರ್‌ ಚೌಧರಿ ಮಾಹಿತಿ ನೀಡಿದರು.

ಆರ್‌ಎಂಎಸ್‌ ಶಾಲೆಯ ಆವರಣದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘6ನೇ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಳೆದ 75 ವರ್ಷಗಳಿಂದ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿಸಲು ಕೆಡೆಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಶೇ 70 ರಷ್ಟು ರಕ್ಷಣಾ ಸಿಬ್ಬಂದಿಯ ಮಕ್ಕಳು, ಶೇ 30ರಷ್ಟು ಸಾರ್ವಜನಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.

‘ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಉದ್ದೇಶದಿಂದ 2022–23ರ ಶೈಕ್ಷಣಿಕ ಸಾಲಿನಲ್ಲಿ ದೇಶದಲ್ಲಿರುವ 5 ಆರ್‌ಎಂಎಸ್‌ ಶಾಲೆಗಳಲ್ಲಿ 6ನೇ ತರಗತಿಗೆ 30 ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಲಾಗಿದೆ. ಬೆಂಗಳೂರಿನ ಆರ್‌ಎಂಎಸ್‌ ಶಾಲೆಯಲ್ಲಿ ಗುಜರಾತಿನ ಹರ್ಷಿ ಪಟೇಲ್‌, ಹರಿಯಾಣದ ವರ್ಷಾ ಯಾದವ್, ಪಂಜಾಬಿನ ದಿಲ್‌ಜಾರ್‌ ಕೌರ್‌, ಆಂಧ್ರಪ್ರದೇಶದ ಗೌರಿ ದೀಪಾ, ಒಡಿಶಾದ ಸಿಮ್ರನ್‌ ಮತ್ತು ಉತ್ತರ ಪ್ರದೇಶದ ಆದಿತಿ ಮಹ್ರಾ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇವರಿಗೆ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ’ ಎಂದರು.

ADVERTISEMENT

‘ಸಾಮಾನ್ಯ ಶಾಲೆಗಳಿಗೆ ಹೋಲಿಸಿದರೆ ಇಲ್ಲಿ ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ, ವ್ಯಕ್ತಿತ್ವ ಬದಲಾವಣೆ, ನೈತಿಕ ಮೌಲ್ಯಗಳು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಪರಿಸರವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ದೇಶ ಸೇವೆ ಮಾಡಬೇಕೆಂಬ ಎಲ್ಲ ವಿದ್ಯಾರ್ಥಿನಿಯರಿಗೆ ಇದೊಂದು ಉತ್ತಮ ವೇದಿಕೆ’ ಎಂದು ವಿದ್ಯಾರ್ಥಿನಿ ಹರ್ಷಿ ಪಟೇಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.