ADVERTISEMENT

ಬೆಂಗಳೂರು: ಸಿಬ್ಬಂದಿಯ ಆರೋಗ್ಯ ತಪಾಸಣೆ ಕಡ್ಡಾಯ

ರೆಸ್ಟೋರೆಂಟ್‌ ನಿರ್ವಹಣೆಗೆ ಬಿಬಿಎಂಪಿ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 10:10 IST
Last Updated 14 ಜೂನ್ 2020, 10:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅನ್‌ಲಾಕ್‌ ನಂತರ ತೆರೆದಿರುವ ರೆಸ್ಟೋರೆಂಟ್‌ಗಳ ನಿರ್ವಹಣೆ ಹೇಗಿರಬೇಕು ಎಂಬುದರ ಬಗ್ಗೆ ಬಿಬಿಎಂಪಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರೆಸ್ಟೋರೆಂಟ್ಸಿಬ್ಬಂದಿಯ ದೇಹದ ಉಷ್ಣಾಂಶವನ್ನುಪ್ರತಿದಿನ ಪರಿಶೀಲಿಸಬೇಕು. ಮನೆಗೆ ಆಹಾರ ಪೂರೈಸುವ ಉದ್ಯೋಗಿಯ ಆರೋಗ್ಯ ತಪಾಸಣೆಯನ್ನು ಪ್ರತಿದಿನ ಮಾಡಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

‘ಗ್ರಾಹಕರ ನಡುವೆ6 ಅಡಿ ಅಂತರ ಕಾಯ್ದುಕೊಳ್ಳಬೇಕು. ರೆಸ್ಟೋರೆಂಟ್‌ಗಳನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಶೇ 50ರಷ್ಟು ಆಸನಗಳಲ್ಲಿ ಮಾತ್ರ ಕೂರಲು ಅವಕಾಶ ನೀಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಕಾರಣ ಮಾಸ್ಕ್ ಇಲ್ಲದ ಗ್ರಾಹಕರಿಗೆ ಅವಕಾಶ ನೀಡಬಾರದು. ಗ್ರಾಹಕದ ದೇಹದ ಉಷ್ಣಾಂಶ ಪರಿಶೀಲಿಸಿದ ಬಳಿಕವೇ ಒಳಕ್ಕೆ ಬಿಡಬೇಕು’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ.

‘ಕೋವಿಡ್‌–19 ಲಕ್ಷಣ ಇರುವ ಗ್ರಾಹಕರು ಕಂಡರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಉಳಿದ ಗ್ರಾಹಕರಿಗೆ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ನಗದು ವಹಿವಾಟು ಕಡಿಮೆ ಮಾಡಿ ಡಿಜಿಟಲ್ ರೂಪದಲ್ಲಿ ನಗದು ಪಾವತಿಸಲು ಗ್ರಾಹಕರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

65 ವರ್ಷಕ್ಕೂ ಮೇಲ್ಪಟ್ಟರು, ಆರೋಗ್ಯದಲ್ಲಿ ಏರುಪೇರು ಇರುವವರು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳ ಪ್ರವೇಶವನ್ನು ನಿಯಂತ್ರಿಸಬೇಕು ಎಂದು ಸೂಚಿಸಿದೆ.

‘ರೆಸ್ಟೋರೆಂಟ್ ಅಥವಾ ಮಾಲ್‌ಗಳಲ್ಲಿ ಇರುವ ಆಟಿಕೆ ಸಾಮಾಗ್ರಿಗಳ ಬಳಕೆಗೆ ಅವಕಾಶ ನೀಡಬಾರದು. ಸಿನಿಮಾ ಮಂದಿರಗಳನ್ನು ತೆರೆಯಬಾರದು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.