ADVERTISEMENT

ಕಾರ್ಪೊರೇಟ್ ಆಸ್ಪತ್ರೆಗಳಿಗಷ್ಟೇ ಲಸಿಕೆ: ಎಸಿಇ ಸುಹಾಸ್ ಆಸ್ಪತ್ರೆ ನಿರ್ದೇಶಕ ಆರೋಪ

ಎಸಿಇ ಸುಹಾಸ್ ಆಸ್ಪತ್ರೆಯ ಡಾ. ಜಗದೀಶ್ ಹಿರೇಮಠ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 1:50 IST
Last Updated 12 ಜೂನ್ 2021, 1:50 IST
ಕೋವಿಡ್ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಡ್ ಲಸಿಕೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಾರ್ಪೊರೇಟ್ ಆಸ್ಪತ್ರೆಗಳಿಗೆ ಲಕ್ಷಾಂತರ ಡೋಸ್‌ಗಳು ಕೋವಿಡ್ ಲಸಿಕೆ ದೊರೆಯುತ್ತಿವೆ. ಆದರೆ, ಸಣ್ಣ ಆಸ್ಪತ್ರೆಗಳಿಗೆ ಒಂದು ಡೋಸ್ ಕೂಡ ಸಿಗುತ್ತಿಲ್ಲ’ ಎಂದು ಎಸಿಇ ಸುಹಾಸ್ ಆಸ್ಪತ್ರೆಯ ನಿರ್ದೇಶಕ ಡಾ. ಜಗದೀಶ್ ಹಿರೇಮಠ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಮೇ 1ರಿಂದ ಖಾಸಗಿ ಆಸ್ಪತ್ರೆಗಳು ಲಸಿಕೆ ತಯಾರಿಕೆ ಕಂಪನಿಗಳಿಂದ ಖರೀದಿಸಿ, ಫಲಾನುಭವಿಗಳಿಗೆ ವಿತರಿಸಲು ಅವಕಾಶ ನೀಡಿದೆ. ಆದರೆ, 50–70 ಹಾಸಿಗೆಗಳ ಸಣ್ಣ ಆಸ್ಪತ್ರೆಗಳು ಕಂಪನಿಗಳಿಗೆ ಎಷ್ಟು ಮನವಿ ಸಲ್ಲಿಸಿದರೂ ಲಸಿಕೆ ಪೂರೈಕೆಯಾಗುತ್ತಿಲ್ಲ. ಅಪೋಲೊ, ಮಣಿಪಾಲ್, ಫೋರ್ಟಿಸ್, ಆಸ್ಟರ್ ಸೇರಿದಂತೆ ವಿವಿಧ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮಾತ್ರ ಲಸಿಕೆ ಸಿಗುತ್ತಿದೆ. ಇದರಿಂದಾಗಿ ಮನೆಯಲ್ಲಿಯೇ ಕೆಲಸ ಮಾಡುತ್ತಿರುವ ಐಟಿ–ಬಿಟಿ ಉದ್ಯೋಗಿಗಳಿಗೆ ಲಸಿಕೆ ದೊರೆಯುತ್ತಿದೆ. ಕಾರ್ಮಿಕರು, ದಿನಗೂಲಿ ನೌಕರರು ಸೇರಿಂದತೆ ಹೊರಗಡೆ ವಿವಿಧ ಕೆಲಸ ಕಾರ್ಯಗಳಲ್ಲಿ ನಿರತರಾದವರಿಗೆ ಲಸಿಕೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಪೊರೇಟ್ ಆಸ್ಪತ್ರೆಗಳ ಲಾಬಿಗೆ ಲಸಿಕೆ ಒದಗಿಸುವ ಕಂಪನಿಗಳು ಒಳಗಾಗಿವೆ. ನಾವು 15 ಸಾವಿರ ಡೋಸ್ ‘ಕೋವಿಶೀಲ್ಡ್’ ಹಾಗೂ 3 ಸಾವಿರ ಡೋಸ್ ‘ಕೋವ್ಯಾಕ್ಸಿನ್‌’ ಲಸಿಕೆ ಪೂರೈಸುವಂತೆ ಕಂಪನಿಗಳಿಗೆ ವಿನಂತಿಸಿಕೊಂಡಿದ್ದೇವು. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಲಸಿಕೆ ಪೂರೈಕೆಯಾಗಿಲ್ಲ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.