ADVERTISEMENT

ನೂರಾರು ಕಾರುಗಳು ಭಸ್ಮ:ಓವರ್‌ಹೀಟ್‌ ಆದ ಕಾರಿನ ಸೈಲೆನ್ಸರ್‌ನಿಂದ ಹೊತ್ತಿತು ಬೆಂಕಿ?

ಏರೋ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 6:35 IST
Last Updated 24 ಫೆಬ್ರುವರಿ 2019, 6:35 IST
   

ಬೆಂಗಳೂರು:ಏರೋ ಇಂಡಿಯಾ ಪ್ರದರ್ಶನ ಕಣ್ತುಂಬಿಕೊಳ್ಳಲು ಬಂದಿದ್ದ ಸಾರ್ವಜನಿಕರಲ್ಲಿ ಅನೇಕರು ತಮ್ಮ ಕಾರುಗಳಲ್ಲಿ ಬಂದಿದ್ದರು. ವಾಹನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಾರುಗಳ ಪೈಕಿ 270ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರುಗಳಲ್ಲಿ ಬರುವವರ ಸಂಖ್ಯೆ ಇಳಿಮುಖವಾಗಿದ್ದು, ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಭಾನುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಪರಿಶೀಲನೆ ನಡೆಸಿದರು.

‘ಓವರ್‌ಹೀಟ್‌ ಆಗಿದ್ದ ಕಾರೊಂದರ ಸೈಲೆನ್ಸರ್‌ನಿಂದ ಬೆಂಕಿ ಹೊಮ್ಮಿದ್ದು, ಬಹುಬೇಗ ಇದು ಪಾರ್ಕಿಂಗ್‌ ಪ್ರದೇಶದ ತುಂಬ ವ್ಯಾಪಿಸಿದೆ. ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಬೆಂಕಿ ವಿಸ್ತರಿಸಿತ್ತು ನೂರಾರು ಕಾರುಗಳಿಗೆ ಬೆಂಕಿ ತಗುಲಿದೆ’ ಎಂದು ಅಗ್ನಿ ಅವಘಡಕ್ಕೆಸಂಭಾವ್ಯಕಾರಣಗಳ ಬಗ್ಗೆರಕ್ಷಣಾ ಸಚಿವೆಗೆವಿವರಿಸಲಾಗಿದೆ. ಈ ಬಗ್ಗೆ ರಕ್ಷಣಾ ವಕ್ತಾರರ ಟ್ವಿಟರ್ ಖಾತೆ ಪ್ರಕಟಿಸಿಕೊಂಡಿದೆ.

ವಾಯುಪಡೆಯ ತುರ್ತು ಸೇವೆಗಳ ಹಿರಿಯ ಅಧಿಕಾರಿಗಳು ಸಹ ಸ್ಥಳದಲ್ಲಿದ್ದರು.

ADVERTISEMENT

ಇಂಡಿಯಾ ವೈಮಾನಿಕ ಪ್ರದರ್ಶನದ ಕೊನೆಯ ದಿನವಾದ ಭಾನುವಾರ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನ ಆರಂಭಗೊಂಡಿದೆ. ಶನಿವಾರ ನಡೆದ ಭೀಕರ ಬೆಂಕಿ ಅವಘಡದ ಛಾಯೆಯೂ ಇಲ್ಲವೆಂಬಂತೆ ಸಹಜವಾಗಿ ಪ್ರದರ್ಶನ ನಡೆಯುತ್ತಿದೆ.

ಸೂರ್ಯಕಿರಣ, ಧ್ರುವ್ ಕಾಪ್ಟರ್, ನೇತ್ರಾ, ಯಾಕ್, ತೇಜಸ್ ಯುದ್ಧವಿಮಾನಗಳು ವಿವಿಧ ಕಸರತ್ತಿನ ಮೂಲಕ ನೋಡುಗರನ್ನು

ವಿಸ್ಮಿತರನ್ನಾಗಿಸಿವೆ. ಪ್ರದರ್ಶನ ಮಳಿಗೆಗಳ, ಕಟ್ಟಡಗಳ ಮೇಲೆ ನಿಂತು ಜನ ವೈಮಾನಿಕ ಪ್ರದರ್ಶನ ನೋಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಭಾನುವಾರದ ಪ್ರದರ್ಶನ ಸುಗಮವಾಗಿ ನಡೆಯಲಿದೆಯೇ ಎಂಬ ಬಗ್ಗೆ ಅನುಮಾನವಿತ್ತು. ಕೊನೆಯ ಹಾಗೂ ಸಾರ್ವಜನಿಕರಿಗೆ ಪ್ರವೇಶವಿರುವ ದಿನವಾದ್ದರಿಂದ ಬೆಳಿಗ್ಗೆಯೇ ಭಾರೀ ಸಂಖ್ಯೆಯಲ್ಲಿ ಜನ ಸೇರಬಹುದೆಂಬ ನಿರೀಕ್ಷೆ ಇತ್ತು. ಆದರೆ, ಬೆಳಿಗ್ಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಲಿಲ್ಲ. 11 ಗಂಟೆ ಬಳಿಕ ಗುಂಪುಗಳಲ್ಲಿ ಜನರು ಪ್ರವೇಶಿಸುತ್ತಿರುವುದು ಕಂಡು ಬಂದಿದೆ.

ಇಂದು ಸಮಾರೋಪ: ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲ ವಜುಭಾಯಿ ವಾಲಾ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.