ADVERTISEMENT

ಏರೊ ಇಂಡಿಯಾ: ಜಾಹೀರಾತು ಫಲಕ ಅಳವಡಿಕೆಗೆ ಹೈಕೋರ್ಟ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:26 IST
Last Updated 12 ಜನವರಿ 2023, 20:26 IST
   

ಬೆಂಗಳೂರು: ‘ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಫೆಬ್ರುವರಿ 13ರಿಂದ ಐದು ದಿನಗಳ ಕಾಲ ನಡೆಯಲಿರುವ ‘ಏರೊ ಇಂಡಿಯಾ-2023’ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ತಾತ್ಕಾಲಿಕ ಹೋರ್ಡಿಂರ್ಗ್ಸ್ ಅಳವಡಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ನೀಡಬಹುದು’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬಿಬಿಎಂಪಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಎಚ್.ಕೆ. ರಮೇಶ್, ‘ಯಲಹಂಕ ವಾಯುನೆಲೆಯಲ್ಲಿ ಫೆಬ್ರುವರಿ 13ರಿಂದ 17ರವರೆಗೆ ನಡೆಯಲಿರುವ ಏರೊ ಇಂಡಿಯಾ-2023 ವೈಮಾನಿಕ ಪ್ರದರ್ಶನ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ. ಇಲ್ಲಿಗೆ ಜಗತ್ತಿನ ವಿವಿಧೆಡೆಯಿಂದ ಜನರು ಬರಲಿದ್ದಾರೆ. ಆದ್ದರಿಂದ, ಸೂಕ್ತ ಮಾಹಿತಿ ಹಾಗೂ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಹೋರ್ಡಿಂಗ್, ಸೂಚನಾಫಲಕ ಮತ್ತು ಮಾರ್ಗ ನಕ್ಷೆ ಅಳವಡಿಸಲು ಅನುಮತಿಗೆ ಕೋರಲಾಗಿದೆ. ಪ್ರದರ್ಶನ ಮುಗಿದನಂತರ ಅವುಗಳನ್ನು ತೆರವುಗೊಳಿಸಲಾಗುವುದು’ ಎಂದರು.

ADVERTISEMENT

ಇದನ್ನು ಪರಿಗಣಿಸಿದ ನ್ಯಾಯಪೀಠ, ಜಾಹೀರಾತು ಫಲಕ ಪ್ರದರ್ಶಿಸುವ ದಿಸೆಯಲ್ಲಿ ಎಚ್‌ಎಲ್‌ಗೆ ಅನುಮತಿ ನೀಡಲು ಬಿಬಿಎಂಪಿಗೆ ಅವಕಾಶ ಕಲ್ಪಿಸಿತು. ಇದೇ ವೇಳೆ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳನ್ನು ಜಾರಿಗೆ ತರುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ಸಮಗ್ರ ವರದಿಯನ್ನು ಸಲ್ಲಿಸಿ’ ಎಂದೂ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.