ADVERTISEMENT

ಏರೊ ಇಂಡಿಯಾ: ಆಗಸ ನೋಡಲು ನೂಕುನುಗ್ಗಲು

ಖಲೀಲಅಹ್ಮದ ಶೇಖ
Published 13 ಫೆಬ್ರುವರಿ 2025, 20:12 IST
Last Updated 13 ಫೆಬ್ರುವರಿ 2025, 20:12 IST
ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಗುರುವಾರ ಬಂದಿದ್ದ ಜನಸಾಗರ 
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಗುರುವಾರ ಬಂದಿದ್ದ ಜನಸಾಗರ  ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಗುರುವಾರ ಕಿಕ್ಕಿರಿದು ಸೇರಿದ್ದ ಜನ, ವಿಮಾನಗಳ ಹಾರಾಟವನ್ನು ಹತ್ತಿರದಿಂದ ಕಣ್ತುಂಬಿಕೊಂಡು ಸಂಭ್ರಮಿಸಿದರು.

ವೈಮಾನಿಕ ಪ್ರದರ್ಶನದ ಕೊನೆಯ ಎರಡು ದಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಎಳೆ ಬಿಸಿಲು ಏರುವ ಮುನ್ನವೇ ಲಗುಬಗೆಯಿಂದ ಬಂದು ಸೇರಿದ್ದ ಜನ, ಲೋಹದ ಹಕ್ಕಿಗಳ ಹಾರಾಟಕ್ಕೆ ಕಾತರದಿಂದ ಕಾದಿದ್ದರು. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಯಿತು. ವೈಮಾನಿಕ ಪ್ರದರ್ಶನದ ಬಳಿ ತೆರಳುವ ಮುನ್ನ ಸಾರ್ವಜನಿಕರಿಗೆ ಸಂಚಾರ ದಟ್ಟಣೆಯ ಬಿಸಿ ತಟ್ಟಿತು.

ಸುಖೋಯ್, ತೇಜಸ್ ಯುದ್ಧ ವಿಮಾನಗಳು ಘರ್ಜನೆ ನಡುವೆ ನೀಡಿದ ಪ್ರದರ್ಶನ ವೀಕ್ಷಕರನ್ನು ನಿಬ್ಬೆರಗಾಗಿಸಿತು. ಸೂರ್ಯ ಕಿರಣ್ ತಂಡ ನಡೆಸಿದ ಕಸರತ್ತು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಆಕಾಶದಲ್ಲಿ ಬಿಡಿಸಿದ ಚಿತ್ತಾರ, ಎದುರಿನಿಂದ ಬಂದು ಡಿಕ್ಕಿಯಾಗುತ್ತವೆ ಎನ್ನುಷ್ಟರಲ್ಲೇ ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡು ಬಾಗಿ ಸಾಗುವ ದೃಶ್ಯಗಳು ಅಚ್ಚರಿ ಮೂಡಿಸಿದವು. ಸೂರ್ಯ ಕಿರಣ್ ತಂಡವು ಆಗಸದಲ್ಲಿ ಬಿಡಿಸಿದ ಹೃದಯಾಕಾರದ ಚಿತ್ತಾರ ಮನಮೋಹಕವಾಗಿತ್ತು. ತ್ರಿವರ್ಣ ಹೊಗೆ ಉಗುಳುತ್ತಾ ಸಾಗಿದ ಪರಿ ಕಣ್ತುಂಬಿಕೊಂಡ ಮಕ್ಕಳು, ಯುವಕರು ಕೇಕೆ ಹಾಕಿ ಸಂಭ್ರಮಿಸಿದರು. 

ADVERTISEMENT

ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಜನ ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ಛತ್ರಿಯ ಮೊರೆ ಹೋಗಿದ್ದರು. ವೃದ್ಧರಾದಿಯಾಗಿ ಹಲವರು ಮಡಚಬಹುದಾದ ಕುರ್ಚಿಗಳಲ್ಲಿ ಕುಳಿತುಕೊಂಡು ಪ್ರದರ್ಶನವನ್ನು ಕಣ್ತುಂಬಿಕೊಂಡರು. ಎಲೆಕ್ಟ್ರಿಕ್‌ ವಾಹನಗಳ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಬಾಟಲಿಗಳನ್ನು ಸ್ವಯಂ ಸೇವಕರು ವಿತರಣೆ ಮಾಡಿದರು.

ರಷ್ಯಾದ ಸುಖೋಯ್ ಯುದ್ಧ ವಿಮಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಸೆಲ್ಫಿ ಪಾಯಿಂಟ್‌ ಬಳಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಮೆರಿಕನ್‌ ವಾಯು ಪಡೆಯ ಬ್ಯಾಂಡ್‌ ಪ್ರಸ್ತುತಪಡಿಸಿದ ಗೀತೆಗಳಿಗೆ ಯುವಕರು ಹೆಜ್ಜೆ ಹಾಕಿದರು.

ಸೂರ್ಯ ಕಿರಣ್ ತಂಡದ ಸದಸ್ಯರು ಧರಿಸುವ ಬಟ್ಟೆ, ವಿಮಾನದ ಮಾದರಿಯ ಆಟಿಕೆಗಳನ್ನು ಸಾರ್ವಜನಿಕರು ನಾ ಮುಂದು, ತಾ ಮುಂದು ಎಂದು ಖರೀದಿಸುತ್ತಿದ್ದುದು ಕಂಡುಬಂತು. ಎಚ್‌ಎಎಲ್‌ ಮತ್ತು ಭಾರತೀಯ ವಾಯು ಸೇನೆಯ ನೌಕರರ ಪತ್ನಿಯರೇ ಸೇರಿಕೊಂಡು ಕಟ್ಟಿರುವ ಎರಡು ಪ್ರತ್ಯೇಕ ಫ್ಯಾಮಿಲಿ ವೆಲ್‌ಫೇರ್‌ ಸಂಘಗಳ ಮಳಿಗೆಗಳಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ಇಲ್ಲಿ ಹಲವು ಬಗೆಯ ಯುದ್ಧ ವಿಮಾನಗಳ ಮಾದರಿಗಳು, ಶರ್ಟ್‌, ಕ್ಯಾಪ್‌, ಆಭರಣ ಸೇರಿದಂತೆ ವಿವಿಧ ವಸ್ತುಗಳು ಲಭ್ಯವಿವೆ. ಸಾರ್ವಜನಿಕರು ತಂಡೋಪತಂಡವಾಗಿ ತೆರಳಿ ತಮಗೆ ಇಷ್ಟವಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ್ ತಂಡವು ಗುರುವಾರ ಆಕಾಶದಲ್ಲಿ ಮೂಡಿಸಿದ ತ್ರಿವರ್ಣ ಪ್ರದರ್ಶನದ ಚಿತ್ತಾರವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಕೆರೆ ಏರಿ ಅಪಾರ್ಟ್‌ಮೆಂಟ್‌ಗಳ ಮೇಲೆ ಜನರ ದಂಡು

ವಾಯು ನೆಲೆಗೆ ಪ್ರವೇಶ ‍ಪಡೆಯಲು ಸಾಧ್ಯವಾಗದ ಜನ ಹೆದ್ದಾರಿ ಬದಿಯಲ್ಲಿರುವ ಹುಣಸಮಾರನಹಳ್ಳಿ ಕೆರೆಯ ಏರಿಯ ಮೇಲೆ ಕುಳಿತು ಲೋಹದ ಹಕ್ಕಿಗಳ ಕಸರತ್ತು ವೀಕ್ಷಿಸಿದರು. ವಾಯುನೆಲೆಯ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ವೈಮಾನಿಕ ಪ್ರದರ್ಶನ ವೀಕ್ಷಿಸಲು ₹200 ಶುಲ್ಕ ಪಡೆದು ವೀಕ್ಷಕರಿಗೆ ಬೇಕಾದ ಸೌಕರ್ಯಗಳನ್ನು ನೀಡಲಾಗಿತ್ತು. ವಿಮಾನಗಳು ಆಗಸದಲ್ಲೇ ತಮ್ಮ ಕಸರತ್ತು ಪ್ರದರ್ಶಿಸುತ್ತಿದ್ದುದರಿಂದ ಹೊರಗಿದ್ದ ಜನರಿಗೂ ಹತ್ತಿರದಿಂದಲೇ ನೋಡಿದ ಅನುಭವ ಆಯಿತು. ರಸ್ತೆ ಬದಿಯಲ್ಲಿ ವಾಹನ ದಟ್ಟಣೆ ಉಂಟಾಗದಂತೆ ಸಂಚಾರ ವಿಭಾಗದ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಕೆರೆಯ ಸುತ್ತಲೂ ಜನ ಸಂದಣಿ ಹೆಚ್ಚಿತ್ತು.

ಸಂಚಾರ ದಟ್ಟಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಗುರುವಾರದಿಂದ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವುದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.  ವೈಮಾನಿಕ ಪ್ರದರ್ಶನದ ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಲಾ ವಾಹನಗಳು ಕಾರುಗಳು ದ್ವಿಚಕ್ರ ವಾಹನಗಳು ಬಸ್‌ಗಳ ಸಂಖ್ಯೆ ಹೆಚ್ಚಾಗಿತ್ತು. ಬೆಳಿಗ್ಗೆಯಿಂದಲೇ ಹೆಬ್ಬಾಳ ಬಳ್ಳಾರಿ ರಸ್ತೆ ಕೊಡಿಗೆಹಳ್ಳಿ ಜಕ್ಕೂರು ಸೇರಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮೇಖ್ರಿ ವೃತ್ತ ಹೆಬ್ಬಾಳದಿಂದಲೇ ಸಂಚಾರ ವಿಭಾಗದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಸ್ ಲಾರಿ ಸೇರಿ ಭಾರಿ ವಾಹನಗಳನ್ನು ತಡೆದು ಸರ್ವೀಸ್ ರಸ್ತೆಯಲ್ಲಿ ಕಳುಹಿಸಿದರು. ಸಂಜೆ ವಾಯುನೆಲೆಯಿಂದ ಹೊರಟವರೂ ದಟ್ಟಣೆಯಲ್ಲಿ ಸಿಲುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.