ADVERTISEMENT

ಬೆಂಗಳೂರು|ಅಫ್ಗನ್ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯರಿಗೆ ನಿರ್ಬಂಧ: ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 16:03 IST
Last Updated 11 ಅಕ್ಟೋಬರ್ 2025, 16:03 IST
   

ಬೆಂಗಳೂರು: ನವದೆಹಲಿಯಲ್ಲಿರುವ ಅಫ್ಗನ್ ರಾಯಭಾರ ಕಚೇರಿಯಲ್ಲಿ ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಿಂದ ಪತ್ರಕರ್ತೆಯರನ್ನು ಹೊರಗಿಟ್ಟಿರುವ ಕ್ರಮವನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ಖಂಡಿಸಿದೆ.

ಭಾರತದ ನೆಲದಲ್ಲಿ ನಡೆದಿರುವ ಈ ಉದ್ದೇಶಪೂರ್ವಕ ಲಿಂಗ ತಾರತಮ್ಯದ ಕೃತ್ಯವು ಆತಂಕಕಾರಿಯಾಗಿದೆ. ಇದು ಅಸಮಾನತೆ ಮತ್ತು ತಾರತಮ್ಯವನ್ನು ನಿಷೇಧಿಸುವ ಭಾರತದ ಸಂವಿಧಾನದ ವಿಧಿ 14 ಮತ್ತು 15ರ ಆಶಯಕ್ಕೆ ವಿರುದ್ಧವಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಪತ್ರಿಕಾಗೋಷ್ಠಿಯಿಂದ ದೂರ ಉಳಿದಿದೆ. ಆದರೆ, ಭಾರತದೊಳಗೆ ನಡೆಯುವ ಯಾವುದೇ ರಾಜತಾಂತ್ರಿಕ ಕಾರ್ಯಕ್ರಮವು ಇಂತಹ ಲಿಂಗ ತಾರತಮ್ಯವನ್ನು ಮಾನ್ಯ ಮಾಡದಂತೆ ಅಥವಾ ಸಹಿಸದಂತೆ ನೋಡಿಕೊಳ್ಳುವ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ.

ADVERTISEMENT

ಈ ತಾರತಮ್ಯದ ಕೃತ್ಯವನ್ನು ಭಾರತ ಸರ್ಕಾರವು ಕಟುವಾಗಿ ಖಂಡಿಸಿ ಹೇಳಿಕೆ ನೀಡಬೇಕು. ಭಾರತದಲ್ಲಿನ ಯಾವುದೇ ವಿದೇಶಿ ರಾಯಭಾರ ಕಚೇರಿಯ ಕಾರ್ಯಕ್ರಮವು ಲಿಂಗ ಸಮಾನತೆಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಪತ್ರಕರ್ತೆಯರಿಗೆ ಪ್ರವೇಶ ನಿಷೇಧಿಸಿದ ಸ್ಥಳಗಳಲ್ಲಿ ವರದಿ ಮಾಡದಿರುವ ಕುರಿತು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಿಕಾ ಸಮಿತಿಗಳು ನಿರ್ಧರಿಸಬೇಕು ಎಂದು ಸಂಘ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.