ADVERTISEMENT

ನಟ ಪುನೀತ್ ಸಾವಿನ ಸಂಶಯ; ವೈದ್ಯರ ಮನೆಗೆ ಭದ್ರತೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 22:15 IST
Last Updated 6 ನವೆಂಬರ್ 2021, 22:15 IST
ನಟ ಪುನೀತ್ ರಾಜ್‌ಕುಮಾರ್
ನಟ ಪುನೀತ್ ರಾಜ್‌ಕುಮಾರ್   

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಭಿಮಾನಗಳು, ಸೂಕ್ತ ತನಿಖೆ ನಡೆಸುವಂತೆ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಪುನೀತ್ ಅವರ ಕುಟುಂಬದ ವೈದ್ಯ ಡಾ. ರಮಣ್‌ರಾವ್ ಮನೆ ಹಾಗೂ ಕ್ಲಿನಿಕ್‌ಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

‘ಪುನೀತ್ ಅಭಿಮಾನಿ ಎಂದು ಹೇಳಿಕೊಂಡ ಅರುಣ್ ಪರಮೇಶ್ವರ್ ಎಂಬುವರು ಗುರುವಾರ ದೂರು ನೀಡಿದ್ದಾರೆ. ಪುನೀತ್‌ರಿಗೆ ಅವರ ಕುಟುಂಬದ ವೈದ್ಯ ಡಾ. ರಮಣ್‌ರಾವ್ ಆರಂಭದಲ್ಲಿ ಯಾವ ರೀತಿ ಚಿಕಿತ್ಸೆ ನೀಡಿದ್ದರು ? ವಿಕ್ರಮ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಡವಾಗಿ ಹೇಳಿದ್ದೇಕೆ ? ಪುನೀತ್ ಅವರಿಗೆ ನಿಜವಾಗಿಯೂ ಏನಾಗಿತ್ತು ? ಎಂಬುದಾಗಿ ದೂರಿನಲ್ಲಿ ಪ್ರಶ್ನಿಸಿದ್ದಾರೆ. ದೂರು ಸ್ವೀಕರಿಸಲಾಗಿದ್ದು, ಹಿರಿಯ ಅಧಿಕಾರಿಗಳ ಸಲಹೆಯಂತೆ ಮುಂದುವರಿಯಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇನ್ನೊಬ್ಬ ಅಭಿಮಾನಿ ಶನಿವಾರ ಎರಡನೇ ದೂರು ನೀಡಿದ್ದಾರೆ. ವೈದ್ಯ ರಮಣ್ ರಾವ್ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅವರ ದೂರನ್ನೂ ಪರಿಶೀಲಿಸಲಾಗುತ್ತಿದೆ’ ಎಂದೂ ತಿಳಿಸಿದರು.

ADVERTISEMENT

‘ವೈದ್ಯರ ಮನೆ ಹಾಗೂ ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಲು ಕೆಲವರು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು, ಎರಡೂ ಕಡೆ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದೂ ಹೇಳಿದರು.

ತಮ್ಮ ವಿರುದ್ಧದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಾ. ರಮಣ್‌ರಾವ್, ‘ಪುನೀತ್ ರಾಜ್‌ಕುಮಾರ್ ಆಸ್ಪತ್ರೆಗೆ ಬಂದಾಗ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅನುಮಾನ ಬೇಡವೆಂದು ಇಸಿಜಿ ಮಾಡಲಾಗಿತ್ತು. ಲಘು ಹೃದಯಘಾತವಾಗಿರಬಹುದೆಂಬ ಅನುಮಾನ ಬಂದಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಮ್ ಆಸ್ಪತ್ರೆಗೆ ಕಳುಹಿಸಲಾಯಿತು’ ಎಂದಿದ್ದಾರೆ.

‘35 ವರ್ಷಗಳಿಂದ ಡಾ. ರಾಜ್‌ಕುಮಾರ್ ಕುಟುಂಬದವರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಪುನೀತ್ ನನ್ನ ಮಗನಿದ್ದಂತೆ. ನನ್ನಿಂದ ಯಾವುದೇ ಲೋಪ ಆಗಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.