ಬೆಂಗಳೂರು: ರಾಮಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸುವ ಒಡಂಬಡಿಕೆಗೆ ರಾಮಯ್ಯ ತಾಂತ್ರಿಕ ವಿದ್ಯಾಲಯ (ಆರ್‌ಐಟಿ), ಜೆಎಸ್‌ಡಬ್ಲ್ಯುಐಪಿ ಹೋಲ್ಡಿಂಗ್ಸ್ ಹಾಗೂ ಶಾರಿಕ ಸ್ಮಾರ್ಟ್ ಟೆಕ್ ಸಂಸ್ಥೆಗಳು ಸಹಿ ಹಾಕಿವೆ.
ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಗುರುವಾರ ಜೆಎಸ್‌ಡಬ್ಲ್ಯು ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್, ಶಾರಿಕ ಸ್ಮಾರ್ಟೆಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕೌಲ್, ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಆರ್. ಜಯರಾಮ್ ಸಹಿ ಹಾಕಿದರು.
ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಆರ್. ಜಯರಾಮ್ ಮಾತನಾಡಿ, ‘₹5 ಕೋಟಿ ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ಮಾಣಗೊಳ್ಳಲಿದ್ದು, ಸಂಶೋಧನೆ, ತರಬೇತಿಗೆ ಸಹಾಯವಾಗಲಿದೆ. ಫ್ಲೆಕ್ಸಿಬಲ್ ಪವರ್ ಸಿಸ್ಟಂ, ಸ್ಮಾರ್ಟ್ ಗ್ರಿಡ್ ರೂಪಿಸುವ ಯೋಜನೆ ಇದೆ. 'ಸೇವೆಗಾಗಿ ಪ್ರಯೋಗಾಲಯ’ ಎಂಬ ಪರಿಕಲ್ಪನೆಯಲ್ಲಿ ವೃತ್ತಿಪರರು, ನವೋದ್ಯಮಿಗಳನ್ನು ಸೃಷ್ಟಿಸುವ ಆಲೋಚನೆಯನ್ನು ಕಾಲೇಜು ಹೊಂದಿದೆ’ ಎಂದು ತಿಳಿಸಿದರು.
ಸಜ್ಜನ್ ಜಿಂದಾಲ್ ಮಾತನಾಡಿ, ‘ಈ ಕಾಲೇಜಿನಲ್ಲಿ 1980ರ ದಶಕದಲ್ಲಿ ನಾನು ಓದುವ ಸಂದರ್ಭದಲ್ಲಿ ಕಾಲೇಜಿನ ಕ್ಯಾಂಪಸ್ ಇಷ್ಟು ದೊಡ್ಡದಾಗಿರಲಿಲ್ಲ. ಇಂದು ಸಾಕಷ್ಟು ಬೆಳೆವಣಿಗೆ ಹೊಂದಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಾನು ಓದಿದ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ‘ಸೆಂಟರ್ ಆಫ್ ಎಕ್ಸೆಲೆನ್ಸ್’ ಆರಂಭಕ್ಕೆ ಅನುದಾನ ನೀಡುತ್ತಿದ್ದೇನೆ’ ಎಂದು ಹೇಳಿದರು.
ಗೋಕುಲ ಶಿಕ್ಷಣಸಂಸ್ಥೆ ಉಪಾಧ್ಯಕ್ಷ ಎಂ.ಆರ್. ಸೀತಾರಾಂ, ಕಾರ್ಯದರ್ಶಿ ಎಂ.ಆರ್. ರಾಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ರಾಮಪ್ರಸಾದ್, ಪ್ರಾಂಶುಪಾಲ ಎನ್.ವಿ.ಆರ್.ನಾಯ್ಡು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.