ADVERTISEMENT

ಯಶವಂತಪುರ | ಈರುಳ್ಳಿ, ಆಲೂಗಡ್ಡೆ ವ್ಯಾಪಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 2:35 IST
Last Updated 18 ಜೂನ್ 2020, 2:35 IST

ಬೆಂಗಳೂರು: ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ, ಶುಂಠಿ ವ್ಯಾಪಾರ ಪುನರಾರಂಭಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾತ್ಕಾಲಿಕ ಅನುಮತಿ ನೀಡಿದೆ. ಪರವಾನಗಿ ಹಾಗೂ ಮಳಿಗೆ ಹೊಂದಿರುವ ವರ್ತಕರು ಜೂ.30ರವರೆಗೆ ವಾರದಲ್ಲಿ 3 ದಿನಗಳು ಮಾತ್ರ ವಹಿವಾಟು ನಡೆಸುವಂತೆ ಸೂಚಿಸಿದೆ.

ಯಶವಂತಪುರ ಪ್ರಾಂಗಣದಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಈರುಳ್ಳಿ, ಆಲೂಗಡ್ಡೆ ವ್ಯಾಪಾರ ನಡೆಯಲಿದೆ. ದಾಸನಪುರ ಮಾರುಕಟ್ಟೆಯಲ್ಲಿ ಎಂದಿನಂತೆ ವಾರದಲ್ಲಿ 6 ದಿನ ವ್ಯಾಪಾರ ನಡೆಸಬಹುದು. ಜುಲೈ 1ರಿಂದ ಯಶವಂತಪುರದಲ್ಲೂ ವಾರದಲ್ಲಿ ಆರು ದಿನ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಾಗಿ ಸುತ್ತೋಲೆ ತಿಳಿಸಿದೆ.

‘ಕೊರೊನಾ ಸೋಂಕಿನಿಂದ ಪಾರಾಗಲು ಅಂತರ ಕಾಯ್ದುಕೊಳ್ಳುವ ಸಲುವಾಗಿ ಯಶವಂತಪುರದಲ್ಲಿದ್ದ ವರ್ತಕರನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಿಸಲಾಯಿತು. ಈಗ ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ. ಮಾರುಕಟ್ಟೆಯ ವರ್ತಕರೊಂದಿಗೆ ಚರ್ಚೆ ನಡೆಸಿ ಶುಕ್ರವಾರದಿಂದ ವ್ಯಾಪಾರ ಆರಂಭಿಸಲು ನಿರ್ಧರಿಸಿದ್ದೇವೆ’ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಶಂಕರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.