ADVERTISEMENT

ಬೆಂಗಳೂರು: ಎಐ ಆಧಾರಿತ ಕಿಯೋ ಕಂಪ್ಯೂಟರ್ ಅಭಿವೃದ್ಧಿಪಡಿಸಿದ ಕಿಯೋನಿಕ್ಸ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:41 IST
Last Updated 17 ನವೆಂಬರ್ 2025, 15:41 IST
<div class="paragraphs"><p>ತಂತ್ರಜ್ಞಾನ ಶೃಂಗಸಭೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಸಂಕನೂರ, ಎನ್. ಮಂಜುಳಾ, ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಸಂಜೀವ್ ಗುಪ್ತ ಅವರು ಕಿಯೋ ಕಂಪ್ಯೂಟರ್‌ ಪರಿಚಯಿಸುವ ಭಿತ್ತಿಚಿತ್ರ ಪ್ರದರ್ಶಿಸಿದರು </p></div>

ತಂತ್ರಜ್ಞಾನ ಶೃಂಗಸಭೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಸಂಕನೂರ, ಎನ್. ಮಂಜುಳಾ, ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಸಂಜೀವ್ ಗುಪ್ತ ಅವರು ಕಿಯೋ ಕಂಪ್ಯೂಟರ್‌ ಪರಿಚಯಿಸುವ ಭಿತ್ತಿಚಿತ್ರ ಪ್ರದರ್ಶಿಸಿದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಇಲಾಖೆಯು, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್‌) ಸಹಯೋಗದಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಸಣ್ಣ ಗಾತ್ರದ ಅಗ್ಗದ ಕಂಪ್ಯೂಟರ್‌ ‘ಕಿಯೋ’ ಅನ್ನು ಪರಿಚಯಿಸಿದೆ‌.

ADVERTISEMENT

ಇದೇ 18ರಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆರಂಭವಾಗುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ (ಬಿಟಿಎಸ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕಿಯೋ’ ಅನಾವರಣ ಮಾಡುವರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಐಟಿ–ಬಿಟಿ ಸಚಿವ ಪ್ರಿಯಾಂಕ್​ ಖರ್ಗೆ, ‘ದೇಶದಲ್ಲಿ ಶೇಕಡ 10ಕ್ಕಿಂತ ಕಡಿಮೆ ಜನರು ಕಂಪ್ಯೂಟರ್ ಹೊಂದಿದ್ದಾರೆ. ರಾಜ್ಯದಲ್ಲಿ ಇದರ ಪ್ರಮಾಣ ಶೇಕಡ 15ರಷ್ಟಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ವ್ಯಾಪಕವಾಗಿದ್ದರೂ, ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್‌ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್‌ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ’ ಎಂದು ಹೇಳಿದರು.

ಸೂಕ್ತ ಸಾಧನಗಳ ಲಭ್ಯತೆಯ ಕೊರತೆಯಿಂದಾಗಿ ಶೇಕಡ 60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆ, ಕಾಲೇಜು ತೊರೆಯಲು ಇದು ಕೂಡ ನೇರ ಕಾರಣವಾಗಿದೆ ಎಂದರು.

ಕೈಗೆಟುಕುವ ದರದಲ್ಲಿ ಎ.ಐ ಕಂಪ್ಯೂಟರ್‌ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಒಂದು ವರ್ಷ ಶ್ರಮ ಹಾಕಲಾಗಿದೆ. ಎಐ ಚಿಪ್, ಸಾಧನ ಮತ್ತು ಉಪಕರಣಗಳನ್ನು ರಾಜ್ಯದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಸಣ್ಣ ಉದ್ಯಮಿಗಳಿಗೆ ಹಾಗೂ ಜನಸಾಮಾನ್ಯರಿಗೆ ಡಿಜಿಟಲ್ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ. ಶೃಂಗಸಭೆಯ ಕಿಯೋನಿಕ್ಸ್‌ ಮಳಿಗೆಯಲ್ಲಿ ಸಾರ್ವಜನಿಕರಿಗೆ ‘ಕಿಯೋ’ ಪ್ರದರ್ಶಿಸಲಾಗುತ್ತದೆ ಎಂದು ವಿವರಿಸಿದರು.

ಕಿಯೋದ ವಿಶೇಷಗಳೇನು?: 4ಜಿ, ವೈ-ಫೈ, ಯುಎಸ್‌ಬಿ- ಎ ಮತ್ತು ಯುಎಸ್‌ಬಿ - ಸಿ ಪೋರ್ಟ್‌ಗಳು, ಎಚ್‌ಡಿಎಂಐ ಮತ್ತು ಆಡಿಯೊ ಜ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ. ಇಂಟರ್‌ನೆಟ್‌ ಲಭ್ಯ ಇರದಿದ್ದ ಕಡೆಗಳಲ್ಲೂ ಕಾರ್ಯನಿರ್ವಹಿಸಲು ಎ.ಐ ಅನುವು ಮಾಡಿಕೊಡುತ್ತದೆ.

ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸಹಾಯವಾಗಲು ಡಿಎಸ್‌ಇಆರ್‌ಟಿಯ 8, 9, 10ನೇ ತರಗತಿ ಪಠ್ಯಕ್ರಮ ಅಳವಡಿಸಲಾಗಿದೆ. ಎಐ ಚಾಟ್‌ಬಾಟ್‌ ಇದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದರು.

‘ಕಿಯೋ ಕಂಪ್ಯೂಟರ್‌ ಚಿಪ್ ಸ್ಟಾರ್ಟ್ ಅಪ್ ಕಂಪನಿಯದ್ದಾಗಿದ್ದು, ಉಳಿದ ತಂತ್ರಜ್ಞಾನ, ಹಾರ್ಡ್​ವೇರ್‌ಗಳನ್ನು ಕಿಯೋನಿಕ್ಸ್ ಅಭಿವೃದ್ಧಿಪಡಿಸಿದೆ. ಧಾರವಾಡದ ಐಐಐಟಿ, ಬೆಂಗಳೂರಿನ ಐಐಎಸ್​​ಸಿಯಲ್ಲಿ ಈ ಕಿಯೋ ಕಂಪ್ಯೂಟರ್‌ ಅನ್ನು ಪರೀಕ್ಷೆಗೊಳಪಡಿಸಲಾಗಿದೆ. ಒಂದು ವರ್ಷದಿಂದ ಕಿಯೋ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಪ್‌ಡೇಟ್‌ ಮಾಡಲಾಗಿದೆ. ಈಗಾಗಲೇ ವಿವಿಧ ಕಂಪನಿಗಳಿಂದ ಸುಮಾರು 500 ಕಿಯೋ ಕಂಪ್ಯೂಟರ್‌ಗಳಿಗೆ ಬೇಡಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಕಿಯೋವನ್ನು ತಯಾರಿಸುವ ಬಗ್ಗೆ ಚಿಂತನೆ ಇದೆ’ ಎಂದು ತಿಳಿಸಿದರು.

‘ಬಿಡುಗಡೆ ಬಳಿಕ Keonext.in ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಇರಲಿದೆ. ಕಾಯ್ದರಿಸಿದ ಎರಡು ತಿಂಗಳಲ್ಲಿ ವಿತರಣೆ ಮಾಡಲಾಗುವುದು. ಕಿಯೋನಿಕ್ಸ್ ಮೂಲಕ ಎಲೆಕ್ಟ್ರಾನಿಕ್ ಕ್ರಾಂತಿ ಮಾಡುವ ಗುರಿ ಹೊಂದಿದ್ದು, ಸೆಮಿಕಂಡಕ್ಟರ್ ಕಂಪನಿ, ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಯ ಹೆಸರನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು’ ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ‘ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕಿಯೋ ಬಳಕೆಯಾಗಲಿದೆ. ಡಿಜಿಟಲ್ ಕಲಿಕೆ, ಕೌಶಲ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ತಂತ್ರಜ್ಞಾನದ ಬೆಳವಣಿಗೆ ಸಾಧಿಸುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಡಿಜಿಟಲ್ ಅವಕಾಶವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಧ್ಯೇಯವನ್ನು ಸಾಕಾರಗೊಳಿಸಲು ನೆರವಾಗಲಿದೆ’ ಎಂದು ತಿಳಿಸಿದರು.

* ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ಭವಿಷ್ಯ ರೂಪಿಸುವ ಧ್ಯೇಯಕ್ಕೆ (ಫ್ಯೂಚರೈಸ್ ಥೀಮ್‌) ಅನುಗುಣವಾಗಿ ಹತ್ತು ವಿಚಾರಗೋಷ್ಠಿಗಳು 

* ಕ್ವಾಂಟಂ ಕಂಪ್ಯೂಟಿಂಗ್‌ ಮತ್ತು ಜೈವಿಕ ತಂತ್ರಜ್ಞಾನದಂತಹ ವೈಜ್ಞಾನಿಕ ಸಂಶೋಧನೆ ಅಥವಾ ಎಂಜಿನಿಯರಿಂಗ್‌ ನಾವೀನ್ಯತೆ ಆಧರಿಸಿದ ಕಂಪನಿಗಳು ಮತ್ತು ನವೋದ್ಯಮಗಳನ್ನು ಸ್ಥಾಪಿಸಿ, ಬೆಳೆಸುವ ಉದ್ದೇಶ 

* ಶೃಂಗಸಭೆಯಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ), ಸ್ಟಾರ್ಟ್‌ಅಪ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ನೀತಿಗಳ ಘೋಷಣೆ 

ಚಿಂತನ-ಮಂಥನದ ವಿಶಿಷ್ಟ ವೇದಿಕೆ

ಐ.ಟಿ ಮತ್ತು ಬಿ.ಟಿ ಇಲಾಖೆ ಹಾಗೂ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ಜಂಟಿಯಾಗಿ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸುವರು. ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಜರ್ಮನಿಯ ಬವೇರಿಯನ್ ರಾಜ್ಯ ಸಂಸತ್ತಿನ ಅಧ್ಯಕ್ಷೆ ಐಲ್‌ ಏಗ್ನರ್ ನಾರ್ವೆಯ ಆರೋಗ್ಯ ಸಚಿವ ಜಾನ್ ಕ್ರಿಶ್ಚಿಯನ್ ವೆಸ್ಟ್ರೆ ಆಸ್ಟ್ರೇಲಿಯಾದ ಮೆಲ್ಬರ್ನ್‌ ಮೇಯರ್ ನಿಕೋಲಸ್ ರೀಸ್ ಮತ್ತು ಎಸ್‌ಟಿಪಿಐ ಮಹಾನಿರ್ದೇಶಕ ಅರವಿಂದ್ ಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇನ್ಫೋಸಿಸ್‌ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಸ್ಟಾರ್ಟ್‌ಅಪ್ ವಿಷನ್‌ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡುವರು. ಮಾಹಿತಿ ತಂತ್ರಜ್ಞಾನ ಮತ್ತು ಡೀಪ್‌ ಟೆಕ್ ನವೋದ್ಯಮ ರಕ್ಷಣೆ ಮತ್ತು ಬಾಹ್ಯಾಕಾಶ ಎಂಬ ಪರಿಕಲ್ಪನೆ ಅಡಿ ಪ್ರದರ್ಶನ ಮತ್ತು ಗೋಷ್ಠಿ ಆಯೋಜಿಸಲಾಗಿದೆ. ಹತ್ತು ಪ್ರಮುಖ ಸಮ್ಮೇಳನಗಳು ನಡೆಯಲಿವೆ. ಇದರಲ್ಲಿ ಐಟಿ ಮತ್ತು ಡೀಪ್‌ಟೆಕ್ ಡಿಜಿ ಹೆಲ್ತ್‌ ಮತ್ತು ಬಯೋಟೆಕ್ ಭಾರತ–ಅಮೆರಿಕ ತಂತ್ರಜ್ಞಾನ ಸಮ್ಮೇಳನ ಗ್ಲೋಬಲ್ ಸಹಯೋಗ ಮತ್ತು ನವೋದ್ಯಮ ಬೆಳವಣಿಗೆ ಉತ್ತೇಜಿಸುವ ವೃತಿಪರರ ಭೇಟಿ ಮತ್ತು ಬಾಂಧವ್ಯ ವೃದ್ಧಿ ಸೇರಿವೆ. ಶೃಂಗಸಭೆಯು ನವೋದ್ಯಮಗಳ ಸ್ಥಾಪಕರು ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಳಗೊಂಡ ಅಂದಾಜು 10 ಸಾವಿರ ಪ್ರತಿಭಾನ್ವಿತರ ಚಿಂತನ - ಮಂಥನದ ವಿಶಿಷ್ಟ ವೇದಿಕೆ ಆಗಿರಲಿದೆ. ನವೋದ್ಯಮ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಿಗಳು ಉದ್ದಿಮೆಗಳ ಆರಂಭಿಕ ಹಂತದ ಸಂಸ್ಥಾಪಕರು ಅನುಭವಿ ಉದ್ಯಮಿಗಳು ಸೇರಿದಂತೆ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಯಸುವ ಎಲ್ಲರಿಗೂ ನೆರವಾಗುವ ಗುರಿ ಹೊಂದಿದೆ. ಪ್ರಮುಖ ತಂತ್ರಜ್ಞಾನ ರಾಷ್ಟ್ರಗಳಾದ ಅಮೆರಿಕ ಉರುಗ್ವೆ ರಷ್ಯಾ ಇಂಗ್ಲೆಂಡ್‌ ಇಸ್ರೇಲ್ ಬೆಲ್ಜಿಯಂ ಫಿನ್‌ಲ್ಯಾಂಡ್ ಫ್ರಾನ್ಸ್ ದುಬೈ ದಕ್ಷಿಣ ಕೊರಿಯಾ ಜಪಾನ್ ಸಿಂಗಪುರ- ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ಶೃಂಗಸಭೆಯ ಜಾಗತಿಕ ಮಹತ್ವವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಿಯಾಂಕ್ ವಿವರಿಸಿದರು. ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಳಾ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.