ADVERTISEMENT

ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌ ನ್ಯಾ.ಜೋಶಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 16:30 IST
Last Updated 24 ಜನವರಿ 2026, 16:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ನ್ಯಾಯಮೂರ್ತಿಗಳು ಅಥವಾ ವಕೀಲರಿಗೆ ಪರ್ಯಾಯವಲ್ಲ. ಹಾಗೆಂದು ಅದನ್ನು ನಿರ್ಲಕ್ಷಿಸಲೂ ಆಗದು. ಆದರೆ, ಅದನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಕೌಶಲ್ಯ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಂ. ಜೋಶಿ ಅಭಿಪ್ರಾಯಪಟ್ಟರು.

ನ್ಯಾ.ಜೋಶಿ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1 ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾನೂನು ಸಮುದಾಯ ಕಾಲಕಾಲಕ್ಕೆ ಬದಲಾಗುತ್ತಿರುವ ತಾಂತ್ರಿಕ ಪ್ರಗತಿಯೊಂದಿಗೆ ಹೆಜ್ಜೆ ಹಾಕುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಕೌಶಲ್ಯ ಸಜ್ಜುಗೊಳಿಸಿಕೊಳ್ಳುವುದು ಅತ್ಯಗತ್ಯ’ ಎಂದರು.

ADVERTISEMENT

‘ದಕ್ಷತೆಯನ್ನು ಹೆಚ್ಚಿಸಲು ನ್ಯಾಯಾಲಯಗಳಲ್ಲಿ ಸಮಗ್ರ ಮಾನವ ಸಂಪನ್ಮೂಲ ನಿರ್ವಹಣಾ ನೀತಿಗಳ ತುರ್ತು ಅಗತ್ಯವಿದೆ. ನಾಗರಿಕರ ಹಕ್ಕುಗಳನ್ನು ನಿರ್ಧರಿಸುವ ಕಾರ್ಯವು ಒಂದು ಗಂಭೀರ ಬಾಧ್ಯತೆಯಾಗಿದೆ. ಯಾವುದೇ ನ್ಯಾಯಮೂರ್ತಿಗಳು ಇದನ್ನು ಲಘುವಾಗಿ ಪರಿಗಣಿಸಲಾಗದು’ ಎಂದರು.

ನಂತರ, ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದಲೂ ನ್ಯಾ.ಜೋಶಿ ಅವರನ್ನು ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು.

ಚಂದ್ರಶೇಖರ ಮೃತ್ಯುಂಜಯ ಜೋಶಿ ಅವರು 1964ರ ಜನವರಿ 24ರಂದು ಹುಬ್ಬಳ್ಳಿಯಲ್ಲಿ ಜನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ತಮ್ಮ ವಕೀಲಿಕೆ ಆರಂಭಿಸಿದ ಅವರು 1995ರ ಫೆಬ್ರುವರಿ 8ರಂದು ಮುನ್ಸಿಫ್‌ ಆಗಿ, 2009ರ ಜುಲೈ 6ರಂದು ಜಿಲ್ಲಾ ನ್ಯಾಯಾಧೀಶರಾಗಿ ಮತ್ತು 2022ರ ಆಗಸ್ಟ್ 16ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಹೈಕೋರ್ಟ್‌ ಕಂಪ್ಯೂಟರ್ಸ್‌ ವಿಭಾಗದ ರಿಜಿಸ್ಟ್ರಾರ್‌ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.