ಬೆಂಗಳೂರು: ‘ಸರ್ಕಾರಿ ವಿಶ್ವವಿದ್ಯಾಲಯಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದ್ಯತೆ ನೀಡುತ್ತಾ ಬಡವರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ಮಾಡುತ್ತಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ. ಮುರಿಗೆಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ, ಸರ್ಕಾರಿ ವಿಶ್ವವಿದ್ಯಾಲಯಗಳ ನಿರ್ವಹಣೆಗೆ ಸಮರ್ಪಕ ಅನುದಾನ ಹಾಗೂ ಮೂಲ ಸೌಲಭ್ಯಗಳಿಗಾಗಿ ಆಗ್ರಹಿಸಿ ಎಐಡಿಎಸ್‌ಒ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿದ್ಯಾರ್ಥಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಹೊರಗುತ್ತಿಗೆ ನೌಕರರಿಗೆ ಹತ್ತು ತಿಂಗಳಿನಿಂದ ವೇತನ ಬಂದಿಲ್ಲ. ಹಂತ ಹಂತವಾಗಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ದೂರಿದರು.
ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಮಾತನಾಡಿ, ‘ವಿವಿಧ ಹಂತಗಳಲ್ಲಿ ವಿಶ್ವವಿದ್ಯಾಲಯಗಳನ್ನು ವಿಭಜಿಸುತ್ತಾ, ಅಗತ್ಯ ಆರ್ಥಿಕ ನೆರವಿಲ್ಲದೇ, ಗುಣಮಟ್ಟದ ಬೋಧಕವರ್ಗದ ಕೊರತೆಯಿಂದ ಬಳಲುತ್ತಿವೆ’ ಎಂದರು.
‘ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಉಳಿಯಬೇಕಾದರೆ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಎಐಡಿಎಸ್ಓ ಕೇಂದ್ರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಿಬಾಷಿಸ್ ಪ್ರಹರಾಜ್ ಮಾತನಾಡಿ, ‘ವಿಶ್ವವಿದ್ಯಾಲಯ ಜ್ಞಾನಾರ್ಜನೆಯ ತಾಣ. ಜ್ಞಾನದ ಪ್ರಸಾರ ಮತ್ತು ಅಭಿವೃದ್ದಿ ವಿಶ್ವವಿದ್ಯಾಲಯಗಳ ಮುಖ್ಯ ಕೆಲಸ. ಆದರೆ ಇದು ಸಾಕಾರವಾಗದಿರುವುದು ಆತಂಕಕಾರಿ ಸಂಗತಿ’ ಎಂದರು. ವಿದ್ಯಾರ್ಥಿಗಳು ಸಂಘಟಿತರಾಗಿ ಸಾರ್ವಜನಿಕ ಶಿಕ್ಷಣ ಉಳಿಸಲು, ವಿಶ್ವವಿದ್ಯಾಲಯಗಳನ್ನು ಬಲಪಡಿಸಲು ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.
ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ. ಕೆ. ಎಸ್ , ಕಾರ್ಯದರ್ಶಿ ಅಜಯ್ ಕಾಮತ್ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ 400 ಮರಗಳನ್ನು ಕಡಿಯುತ್ತಿರುವುದು ಹಾಗೂ ಹಲವು ಕೋರ್ಸ್‌ಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಹಾಗೂ ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರವನ್ನು ಜಾರಿಗೊಳಿಸಲು ಆಗ್ರಹಿಸಿ ಗೊತ್ತುವಳಿಯನ್ನು ಸಮಾವೇಶದಲ್ಲಿ ಮಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.