ADVERTISEMENT

ಮಧ್ಯಾಹ್ನದ ಬಿಸಿಯೂಟ ಯೋಜನೆ: ತಾರತಮ್ಯಕ್ಕೆ ಎಐಡಿಎಸ್‌ಒ ಖಂಡನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:03 IST
Last Updated 17 ಫೆಬ್ರುವರಿ 2026, 16:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾತ್ರ ವಿಸ್ತರಿಸಿ, ಇತರ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳನ್ನು ಈ ಯೋಜನೆಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌ನ (ಎಐಡಿಎಸ್‌ಒ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ADVERTISEMENT

‘ಶಿಕ್ಷಣ ಎಂಬುದು ಸಾಂವಿಧಾನಿಕ ಹಕ್ಕು. ಅದು ಆಯ್ದ ಕೆಲವರಿಗೆ ಮಾತ್ರ ಸೀಮಿತವಾದ ಸೌಕರ್ಯವಲ್ಲ. ಸರ್ಕಾರವೇ ವಿವಿಧ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಾಗ, ಒಂದೇ ರೀತಿಯ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಲ್ಲಿ ಒಂದು ವರ್ಗಕ್ಕೆ ಮಾತ್ರ ಕಲ್ಯಾಣ ಯೋಜನೆಗಳನ್ನು ನೀಡುವುದು ತಾರತಮ್ಯವಾಗಿದೆ. ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಕಾರ್ಮಿಕ ವರ್ಗದ ಕುಟುಂಬಗಳಿಂದ ಬಂದವರಾಗಿದ್ದಾರೆ. ಅವರಿಗೆ ಮಧ್ಯಾಹ್ನದ ಊಟವು ಕೇವಲ ಸೌಲಭ್ಯವಲ್ಲ, ಬದಲಿಗೆ ಹಸಿವಿಲ್ಲದೆ ಶಿಕ್ಷಣವನ್ನು ಮುಂದುವರಿಸಲು ಇರುವ ಅತ್ಯಗತ್ಯವಾಗಿದೆ’ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.

‘ಹಣಕಾಸಿನ ಅಥವಾ ತಾಂತ್ರಿಕ ಅಡಚಣೆಗಳಿದ್ದಲ್ಲಿ, ಸರ್ಕಾರವು ಅದನ್ನು ಪಾರದರ್ಶಕವಾಗಿ ಪರಿಹರಿಸಬೇಕು. ಇಂತಹ ವಿಭಜಿಸುವ ಕ್ರಮಗಳನ್ನು ಅನುಸರಿಸಬಾರದು. ಈ ರೀತಿಯ ಕ್ರಮಗಳು ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸಮಾನ ಶಾಲಾ ಶಿಕ್ಷಣದ ಆಶಯವನ್ನು ದುರ್ಬಲಗೊಳಿಸುತ್ತವೆ. ಸರ್ಕಾರವು ಶಿಕ್ಷಣದಲ್ಲಿ ಸಮಾನ ಅವಕಾಶದ ತತ್ವವನ್ನು ಎತ್ತಿಹಿಡಿಯಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.