ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 15ರಷ್ಟು ಎನ್‌ಆರ್‌ಐ ಕೋಟಾ ಜಾರಿಗೆ ತರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಗುರುವಾರ ಪ್ರತಿಭಟನೆ ನಡೆಸಿತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಎನ್‌ಆರ್‌ಐ ಕೋಟಾ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಖಜಾಂಚಿ ಬಿ.ಜೆ. ಸುಭಾಷ್ ಮಾತನಾಡಿ, ‘ಸಮಾಜ ಸೇವೆ ಮಾಡಲು, ನರಳುತ್ತಿರುವವರ ನೋವನ್ನು ನಿವಾರಿಸಲು ಇರುವುದು ವೈದ್ಯ ವೃತ್ತಿ. ಆದರೆ, ಸರ್ಕಾರ ಶೇಕಡ 15ರಷ್ಟು ಎನ್‌ಆರ್‌ಐ ಕೋಟಾ ಜಾರಿಗೆ ತಂದು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮಾರಾಟ ಮಾಡುತ್ತಿದೆ. ಬಡ ವಿದ್ಯಾರ್ಥಿ ನಿತ್ಯ ಓದಿ ವೈದ್ಯಕೀಯ ಸೀಟು ಪಡೆಯಲು ಶ್ರಮಿಸುತ್ತಾನೆ. ಆದರೆ ಆತನನ್ನು ಕಡೆಗಣಿಸಿ, ವರ್ಷಕ್ಕೆ ₹25 ಲಕ್ಷ ಕೊಡಬಲ್ಲ ಶ್ರೀಮಂತ ವಿದ್ಯಾರ್ಥಿಗೆ ಪ್ರವೇಶ ನೀಡಲಾಗುತ್ತಿದೆ. ಇಂತಹ ವ್ಯವಸ್ಥೆ ರೋಗಿಗಳನ್ನು ಪ್ರೀತಿಸುವ ವೈದ್ಯರನ್ನು ಸೃಷ್ಟಿಸುತ್ತದೆಯೇ ಅಥವಾ ಬಿಳಿ ಕೋಟ್ ಧರಿಸಿದ ವ್ಯಾಪಾರಿಗಳನ್ನು ಸುಷ್ಟಿಸುತ್ತದೆಯೇ? ’ ಎಂದು ಅವರು ಪ್ರಶ್ನಿಸಿದರು.
ಜಿಲ್ಲಾ ಅಧ್ಯಕ್ಷೆ ಸಿ.ಎಂ. ಅಪೂರ್ವ ಮಾತನಾಡಿ, ‘ರಾಜ್ಯದಲ್ಲಿ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಸುಮಾರು ನಾಲ್ಕು ಸಾವಿರ ಎಂಬಿಬಿಎಸ್ ಸೀಟುಗಳಿವೆ. ಹೊಸ ಕೋಟಾದ ಮೂಲಕ ಸುಮಾರು 600 ಸೀಟುಗಳನ್ನು ಹರಾಜು ಹಾಕಲಾಗುತ್ತಿದೆ. ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಬದಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬದಲು, ಸೀಟುಗಳನ್ನು ಮಾರಾಟ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿವರ್ಷ ನೀಟ್ ಕೌನ್ಸೆಲಿಂಗ್ ನಂತರ ಅನೇಕ ವೈದ್ಯಕೀಯ ಆಕಾಂಕ್ಷಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಬಡವರ, ಮಧ್ಯಮ ವರ್ಗದವರ, ಪರಿಶ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿರುದ್ಧದ ವರ್ಗ ನೀತಿಯಾಗಿದೆ. ಎನ್‌ಆರ್‌ಐ ಕೋಟಾವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ. ಕಲ್ಯಾಣ್ ಕುಮಾರ್, ಕಾರ್ಯಕಾರಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರಿಗೆ ವಿಕಾಸಸೌಧದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.