ಎಐಡಿಎಸ್ಒ
ಬೆಂಗಳೂರು: ಕರ್ನಾಟಕ ಪಶು ಮತ್ತು ಪಶು ವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿರುವ ಭೂಮಿಯನ್ನು ಹೈಕೋರ್ಟ್ ಅತಿಥಿ ಗೃಹಕ್ಕೆ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಒ) ಖಂಡಿಸಿದೆ.
ವಿಶ್ವವಿದ್ಯಾಲಯದ 4 ಎಕರೆ ಭೂಮಿಯನ್ನು ಹೈಕೋರ್ಟ್ ಅಧಿಕಾರಿಗಳ ಅತಿಥಿ ಗೃಹ ನಿರ್ಮಾಣಕ್ಕಾಗಿ ಹಸ್ತಾಂತರಿಸುವ ತೀರ್ಮಾನ ಸರಿಯಲ್ಲ. ಇದು ಶಿಕ್ಷಣದ ಮೇಲೆ ನಡೆಯುತ್ತಿರುವ ಸರ್ಕಾರದ ನಿರಂತರ ದಾಳಿಯ ಮತ್ತೊಂದು ನಿದರ್ಶನವಾಗಿದ್ದು, ಶೈಕ್ಷಣಿಕ ಹಾಗೂ ಸಂಶೋಧನಾ ಉದ್ದೇಶಗಳಿಗೆ ಮೀಸಲಾಗಿರುವ ವಿಶ್ವವಿದ್ಯಾಲಯದ ಸಂಪನ್ಮೂಲಗಳು ಕ್ರಮೇಣ ಕಬಳಿಕೆಯಾಗಲಿವೆ ಎಂದು ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
ವಿಶ್ವವಿದ್ಯಾಲಯಕ್ಕೆ ಸೇರಿದ ಈ ಭೂಮಿ ಸಾರ್ವಜನಿಕ ಆಸ್ತಿ ಆಗಿದೆ. ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇಂತಹ ಭೂಮಿಯನ್ನು ಶೈಕ್ಷಣಿಕೇತರ ಉದ್ದೇಶಗಳಿಗೆ ಬಳಸುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಯ ಮೇಲೆ ನೇರ ದಾಳಿ ಆಗುತ್ತದೆ. ಈ ಕ್ರಮವು ಶಿಕ್ಷಣ ಸಂಸ್ಥೆಗಳ ಪಾವಿತ್ರ್ಯವನ್ನು ಹಾಳುಗೆಡುವಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳು ಈಗಾಗಲೇ ಹಣಕಾಸು, ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಇಂತಹ ಸಂದರ್ಭದಲ್ಲಿ ಭೂಮಿಯನ್ನೂ ಕಸಿದುಕೊಳ್ಳುವುದು ಸರಿಯಲ್ಲ. ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿ ಬಲಪಡಿಸಬೇಕಾದ ಸಂದರ್ಭದಲ್ಲಿ, ಇತರ ಇಲಾಖೆಗಳ ‘ಸೌಲಭ್ಯ’ ಹೆಸರಿನಲ್ಲಿ ಅವುಗಳನ್ನು ಕುಗ್ಗಿಸುವುದು ಅತ್ಯಂತ ವಿಷಾದನೀಯ ಎಂದು ಹೇಳಿದ್ದಾರೆ.
ಈ ಅಪಾಯಕಾರಿ ಧೋರಣೆಯ ವಿರುದ್ಧ ಧ್ವನಿ ಎತ್ತಿ, ವಿಶ್ವವಿದ್ಯಾಲಯಕ್ಕೆ ಸೇರಿದ ಭೂಮಿಯನ್ನು ಇತರೆ ಉದ್ದೇಶಗಳಿಗೆ ಹಸ್ತಾಂತರಿಸುವ ಕ್ರಮವನ್ನು ತಡೆಯಬೇಕು ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.