ADVERTISEMENT

ಗಾಳಿ ಗುಣಮಟ್ಟ ‘ಸಮಾಧಾನಕರ’

ಕೊರೊನಾ ಸೋಂಕು ಭೀತಿ: ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಮುಖ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 3:26 IST
Last Updated 23 ಮಾರ್ಚ್ 2020, 3:26 IST
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಾಗರಬಾವಿ ಹೊರವರ್ತುಲ ರಸ್ತೆ ಬಿಕೋ ಎನ್ನುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಾಗರಬಾವಿ ಹೊರವರ್ತುಲ ರಸ್ತೆ ಬಿಕೋ ಎನ್ನುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಇದರಿಂದಾಗಿ ವಾಯುಮಾಲಿನ್ಯದ ಪ್ರಮಾಣ ಇಳಿಮುಖವಾಗಿದೆ.

ಸೋಂಕು ಭೀತಿ ಎದುರಾದ ಬೆನ್ನಲ್ಲೇ ಮಾ.31ರವರೆಗೆ ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಸಂತೆ, ಸಮಾವೇಶ, ಪ್ರದರ್ಶನ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.ಈ ನಡುವೆ, ಕೆಲ ಐಟಿ–ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಲ್ಲಿಯೇ ಕಾರ್ಯನಿರ್ವಹಿಸುವಂತೆ ಸೂಚಿಸಿವೆ. ಇದರಿಂದಾಗಿ ವಾರದ ಬಹುತೇಕ ಎಲ್ಲ ದಿನಗಳು ಎಂ.ಜಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನದಟ್ಟಣೆ ಗಣನೀಯವಾಗಿ ಇಳಿಕೆಯಾಗಿದೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರವಂತೂ ನಗರದಲ್ಲಿನ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದವು. ವಾಹನದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆಗಳು ಖಾಲಿ ಬಿದ್ದಿದ್ದವು. ನಗರದ ರೈಲು ನಿಲ್ದಾಣವನ್ನು ಹೊರತುಪಡಿಸಿ ಉಳಿದೆಡೆ ಗಾಳಿಯ ಗುಣಮಟ್ಟದ ಸೂಚ್ಯಂಕ ಸಮಾಧಾನಕರ ಹಂತವನ್ನು ತಲುಪಿದೆ.

ADVERTISEMENT

ಕಳೆದ ಜನವರಿಯಿಂದ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಏರಿಕೆಯತ್ತ ಮುಖಮಾಡಿತ್ತು. ನಗರದ ಜಂಕ್ಷನ್‌ಗಳಲ್ಲಿ ಉಂಟಾಗುವ ವಾಹನದಟ್ಟಣೆ, ನಮ್ಮ ಮೆಟ್ರೊ ಎರಡನೇ ಹಂತದ ಕಾಮಗಾರಿ, ಕಟ್ಟಡಗಳು ಹಾಗೂ ರಸ್ತೆಗಳ ಕಾಮಗಾರಿ, ಕೈಗಾರಿಕೆಗಳು ಹೊರಸೂಸುವ ಹೊಗೆಗಳು ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿದ್ದವು. ಕಳೆದ ವಾರದವರೆಗೂ ಹೆಬ್ಬಾಳ, ಜಯನಗರ, ನಿಮ್ಹಾನ್ಸ್,ಸೆಂಟ್ರಲ್ ಸಿಲ್ಕ್‌ ಬೋರ್ಡ್,ನಗರದ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿಗಾಳಿಯ ಗುಣಮಟ್ಟದ ಸೂಚ್ಯಂಕ ಕೆಲ ದಿನ ಎಕ್ಯೂಐ 100ರ ಗಡಿ ದಾಟುತ್ತಿತ್ತು. ಈಗ ಜಯನಗರ, ಬಸವೇಶ್ವರನಗರ ಸೇರಿದಂತೆ ಜನವಸತಿ ಪ್ರದೇಶಗಳ ಸುತ್ತಮುತ್ತ ಎಕ್ಯೂಐ ಮಟ್ಟ 60ರ ಆಸುಪಾಸಿನಲ್ಲಿದೆ.

‘ನಗರದಲ್ಲಿಗಾಳಿಯ ಗುಣಮಟ್ಟದ ಸೂಚ್ಯಂಕ ಇಳಿಮುಖವಾಗಿದೆ. ಊರುಗಳಿಗೆ ಹೋಗಿ ಬರುವವರು ಹಾಗೂ ವಿವಿಧ ಕಾಮಗಾರಿಗಳಿಂದ ನಗರದ ರೈಲು ನಿಲ್ದಾಣದಲ್ಲಿ ಮಾತ್ರ ನೂರರ ಗಡಿ ದಾಟಿದೆ’ ಎಂದುಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ)

00–50; ಉತ್ತಮ

51–100; ಸಮಾಧಾನಕರ

101–200; ಮಧ್ಯಮ

201–300; ಕಳಪೆ

301–400;ತುಂಬಾ ಕಳಪೆ

401 ಮೇಲ್ಪಟ್ಟು; ತೀವ್ರ

ನಗರದಲ್ಲಿಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ)

ಪ್ರದೇಶ; ಎಕ್ಯುಐ

ಹೆಬ್ಬಾಳ; 71

ಜಯನಗರ; 69

ಹೊಂಬೇಗೌಡನಗರ; 75

ಸೆಂಟ್ರಲ್ ಸಿಲ್ಕ್‌ ಬೋರ್ಡ್; 73

ನಗರದ ರೈಲು ನಿಲ್ದಾಣ; 134

ಬಸವೇಶ್ವರನಗರ; 51

ಮೈಸೂರು ರಸ್ತೆ ; 62

ಬಾಪೂಜಿನಗರ; 75

ಬಿಟಿಎಂ ಬಡವಾವಣೆ; 51

ಪೀಣ್ಯ; 72

ನಗರದ ಗಾಳಿಯ ಗುಣಮಟ್ಟದ ಸೂಚ್ಯಂಕ ಇಳಿಕೆಯಾಗುತ್ತಿದೆ. ಸೆಂಟ್ರಲ್ ಸಿಲ್ಕ್‌ ಬೋರ್ಡ್ ಸೇರಿದಂತೆ ವಿವಿಧೆಡೆ ವಾಹನ ಸಂಚಾರ ಕಡಿಮೆ ಆಗಿರುವುದೇ ಪ್ರಮುಖ ಕಾರಣ
–ಡಾ. ಲೋಕೇಶ್ವರಿ, ಕೆಎಸ್‌ಪಿಸಿಬಿ ಹಿರಿಯ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.