ಬೆಂಗಳೂರು: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಅವರ ಸುಮಾರು ₹3.98 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಸೋಮವಾರ ತಿಳಿಸಿದೆ.
ಅಂದಾಜು ₹ 2.01 ಕೋಟಿ ಮೌಲ್ಯದ ಫ್ಲ್ಯಾಟ್‌ಗಳು, ನಿರ್ಮಾಣ ಹಂತದ ಕಟ್ಟಡ, ಜಮೀನು ಹಾಗೂ ನಗದು ಸೇರಿ ₹ 1.97 ಕೋಟಿ ಮೌಲ್ಯದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಸಂಬಂಧಿ ಎಂಬುದಾಗಿ ಹೇಳಿಕೊಂಡು ಚಿನ್ನದ ವ್ಯಾಪಾರಿ, ಉದ್ಯಮಿ ಹಾಗೂ ವೈದ್ಯರಿಂದ ಕೋಟ್ಯಂತರ ರೂಪಾಯಿ ಪಡೆದು, ವಾಪಸ್ ನೀಡದೆ ವಂಚನೆ ಮಾಡಿರುವ ಸಂಬಂಧ ಐಶ್ವರ್ಯಾಗೌಡ ಹಾಗೂ ಅವರ ಪತಿ ಕೆ.ಎನ್.ಹರೀಶ್ ವಿರುದ್ಧ ಚಂದ್ರಾಲೇಔಟ್, ಆರ್.ಆರ್. ನಗರ ಪೊಲೀಸ್ ಠಾಣೆ ಹಾಗೂ ಮಂಡ್ಯದಲ್ಲಿ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಹೆಚ್ಚಿನ ಲಾಭ ನೀಡುವುದಾಗಿ ಚಿನ್ನ ಹಾಗೂ ನಗದು ಪಡೆದುಕೊಂಡಿದ್ದರು. ಅಲ್ಲದೇ ಬ್ಯಾಂಕ್ ಖಾತೆಗಳ ಮೂಲಕವು ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಬಳಿಕ ಹಣ ನೀಡುವಂತೆ ದೂರುದಾರರು ಪ್ರಶ್ನಿಸಿದಾಗ ರಾಜಕೀಯ ನಾಯಕರ ಪ್ರಭಾವ ಬಳಸಿ ಐಶ್ವರ್ಯಾ ಗೌಡ ದಂಪತಿ ಧಮಕಿ ಹಾಕುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇ.ಡಿ. ಹೇಳಿದೆ.
ಐಶ್ವರ್ಯಾ ಗೌಡ ಅವರ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲ್ಯಾಟ್ ಮೇಲೆ ಏಪ್ರಿಲ್ 24 ರಂದು ದಾಳಿ ನಡೆಸಿದ್ದ ವೇಳೆ, ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೇ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬಹುಕೋಟಿ ಹಣ ವರ್ಗಾವಣೆ ಆರೋಪ ಸಂಬಂಧ ಐಶ್ವರ್ಯಾ ವಿರುದ್ಧ ಇ.ಡಿ, ಸ್ವಯಂಪ್ರೇರಿತವಾಗಿ ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಏಪ್ರಿಲ್ 25ರಂದು ಬಂಧಿಸಿತ್ತು. ಐಶ್ವರ್ಯಾ ಗೌಡ ಅವರಿಗೆ ಜೂನ್ 18 ರಂದು ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.