ಬೆಂಗಳೂರು: ಕನ್ನಡ ನಾಡಿನಲ್ಲಿ ಸಂಚರಿಸಿದ ಅಕ್ಕಮಹಾದೇವಿ ತನ್ನ ಗುರಿಯನ್ನು ಸಾಧಿಸಿದ ಛಲಗಾತಿಯಾಗಿದ್ದು, ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಮುಕ್ತಾಯಕ ಬಳಗದ ಅಧ್ಯಕ್ಷೆ ರತ್ನಾ ದೇಸಾಯಿ ಹೇಳಿದರು.
ವಚನಜ್ಯೋತಿ ಬಳಗ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ‘ಪೌರಾಣಿಕ ಪಾತ್ರಗಳು ಮತ್ತು ಅಕ್ಕಮಹಾದೇವಿ’ ಕುರಿತು ಅವರು ಉಪನ್ಯಾಸ ನೀಡಿದರು.
‘ಕಣ್ಣೀರಿನಲ್ಲೇ ಕೈತೊಳೆದ ಸೀತೆಯನ್ನು, ನೋವಿನಲ್ಲೇ ಬೆಂದ ದ್ರೌಪದಿಯನ್ನು, ಕೊರಗುತ್ತ ಜೀವನ ಕಳೆದ ಕುಂತಿಯನ್ನು, ಕಲ್ಲಾಗಿ ಕುಳಿತ ಅಹಲ್ಯೆಯನ್ನು ತೋರಿಸಿ ಶತ ಶತಮಾನಗಳಿಂದಲೂ ಹೆಣ್ಣನ್ನು ಸಮಾಧಾನ ಮಾಡುವ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದೆ. ನಾವು ಅಕ್ಕಮಹಾದೇವಿಯತ್ತ ನೋಡಬೇಕು, ಕಲಿಯಬೇಕು’ ಎಂದರು.
‘ತಂದೆ–ತಾಯಿಯ ಕ್ಷೇಮಕ್ಕಾಗಿ ಕೌಶಿಕನನ್ನು ಮದುವೆಯಾದರೂ, ಬುದ್ಧಿವಂತಿಕೆಯಿಂದ ಪಾಲಿಸಲಾಗದ ಷರತ್ತುಗಳನ್ನು ಹಾಕಿ ಅವನನ್ನು ಧಿಕ್ಕರಿಸಿ ಕಾಡುಮೇಡುಗಳಲ್ಲಿ ಅಕ್ಕಮಹಾದೇವಿ ಸಂಚರಿಸಿದರು. ಅನುಭವ ಮಂಟಪದಲ್ಲಿ ಬಸವಣ್ಣ, ಅಲ್ಲಮರೂ ಸೇರಿದಂತೆ ಸಮಸ್ತ ವಚನಕಾರರಿಂದ ಅಕ್ಕ ಎಂದು ಕರೆಸಿಕೊಂಡು ಕದಳಿಯಲ್ಲಿ ತನ್ನ ಗುರಿಯನ್ನು ಸಾಧಿಸಿದ ಮಹಾದೇವಿಯಕ್ಕ ನಿಜವಾದ ನಾಯಕಿ’ ಎಂದು ಬಣ್ಣಿಸಿದರು.
ಸ್ವಾಭಿಮಾನಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಅನುಪಮಾ ಪಂಚಾಕ್ಷರಿ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಶ್ರಾವಣಿ ಹಣ್ಣಿ, ಅಕ್ಕಮಹಾದೇವಿ ಅವರ ಪರಿಚಯ ಭಾಷಣ ಮಾಡಿದರು. ಅಕ್ಕಮಹಾದೇವಿಯಂತೆ ವೇಷ ಧರಿಸಿದ ಆರ್ನ, ರಮಾ ಹೆಬ್ಬಾರ್ ಹಾಡಿದರು.
ಗಾಯಕಿ ಗೀತಾ ಭತ್ತದ್, ವಚನಜ್ಯೋತಿ ಬಳಗದ ಸಿಇಒ ರಾಜಾ ಗುರುಪ್ರಸಾದ್, ಕವಿಗಳಾದ ಗುಂಡೀಗೆರೆ ವಿಶ್ವನಾಥ್, ರಾಜು ಪವಾರ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಪ್ರಭುರಾಜ್, ರಂಗ ಕಲಾವಿದ ಶಿವಲಿಂಗಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.