ADVERTISEMENT

ಮಗನ ‘ಬಧಾಯ್‌’ ನೆರವೇರಿಸಿದ ಅಕ್ಕೈ ದಂಪತಿ

ಅಂತರ್ ಧಾರ್ಮಿಕ ಭಾವೈಕ್ಯ ಬೆಸೆಯುವ ಕಾರ್ಯಕ್ರಮ

ಮಂಜುಶ್ರೀ ಎಂ.ಕಡಕೋಳ
Published 10 ನವೆಂಬರ್ 2019, 19:38 IST
Last Updated 10 ನವೆಂಬರ್ 2019, 19:38 IST
ಮಗು ಅವಿನ್‌ನೊಂದಿಗೆ ಅಕ್ಕೈ ಪದ್ಮಶಾಲಿ ಮತ್ತು ವಾಸು ದಂಪತಿ
ಮಗು ಅವಿನ್‌ನೊಂದಿಗೆ ಅಕ್ಕೈ ಪದ್ಮಶಾಲಿ ಮತ್ತು ವಾಸು ದಂಪತಿ   

ಬೆಂಗಳೂರು:‘ತೃತೀಯಲಿಂಗಿಗಳು ಭಿಕ್ಷಾಟನೆ ಮಾಡುವವರು, ಅವರಿಗೆ ಮಗು ಸಾಕಲು ಯೋಗ್ಯತೆಯಿಲ್ಲ’ ಅನ್ನುವ ಅವಮಾನ–ಮೂದಲಿಕೆಯ ಮಾತುಗಳನ್ನು ಮೆಟ್ಟಿನಿಂತು ಮಗು ದತ್ತು ಪಡೆದಿದ್ದ ಅಕ್ಕೈ ಪದ್ಮಸಾಲಿ ಮತ್ತು ವಾಸು ದಂಪತಿ ಭಾನುವಾರ ಸಂಭ್ರಮದಿಂದ ತಮ್ಮ ಮಗುವಿನ ನಾಮಕರಣ ನೆರವೇರಿಸಿದರು.

ನಗರದ ಎಸ್‌ಸಿಎಂಐ ಹೌಸ್‌ನಲ್ಲಿ ಭಾನುವಾರ ಹಿಜ್ರಾ ಸಮುದಾಯದ ನಾಯಕಿ ಗೀತಮ್ಮ ನಾಯಕ್ ಅವರ ನೇತೃತ್ವದಲ್ಲಿ ನಡೆದ ‘ಬಧಾಯ್‌’ ಕಾರ್ಯಕ್ರಮದಲ್ಲಿ ಮಗುವಿಗೆ ‘ಅವಿನ್‌’ ಎಂದು ನಾಮಕರಣ ಮಾಡಲಾಯಿತು.

ಏನಿದು ‘ಬಧಾಯ್‌’?: ಹಿಜ್ರಾ ಸಮುದಾಯದ ಸಂಪ್ರದಾಯದಲ್ಲಿ ಮಗುವಿಗೆ ಸರ್ವಧರ್ಮದ ಪ್ರಕಾರ ಪ್ರಾರ್ಥನೆ ಸಲ್ಲಿಸಿ, ಆಶೀರ್ವದಿಸುವುದೇ ‘ಬಧಾಯಿ’ ಕಾರ್ಯಕ್ರಮ. ಸಮುದಾಯದ ಹಿರಿಯರು ಇದರ ನೇತೃತ್ವ ವಹಿಸುತ್ತಾರೆ.

ADVERTISEMENT

ನಾವೂ ಮಕ್ಕಳು ಸಾಕಬಲ್ಲೆವು: ‘ತೃತೀಯಲಿಂಗಿಗಳು ಮಕ್ಕಳ ಅಪಹರಣಕಾರರು ಎಂಬ ಕೆಟ್ಟ ಹೆಸರು ನಮ್ಮ ಸಮುದಾಯಕ್ಕಿದೆ. ನಮಗೂ ತಾಯ್ತನದ ತುಡಿತಗಳಿವೆ. ನಾವೂ ಇತರ ದಂಪತಿಗಳಂತೆ ಮಕ್ಕಳನ್ನು ದತ್ತು ಪಡೆದು ಸಾಕಬಲ್ಲೆವು. ಈ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲೆಂದೇ ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ‘ಬಧಾಯಿ’ ಕಾರ್ಯಕ್ರಮ ಆಯೋಜಿಸಿದೆ’ ಎಂದರು ಅಕ್ಕೈ.

‘ಬಧಾಯಿ’ಗೆ ಸಾಂಪ್ರದಾಯಿಕ ಹಿನ್ನೆಲೆ ಇದೆ. ಹಿಜ್ರಾ ಸಮುದಾಯದಲ್ಲಿ ನಾಯಕರು ಅನಿಸಿಕೊಂಡ ಹಿರಿಯ ಮಹಿಳೆಯರು ಪಾಲ್ಗೊಂಡು ಕಿರಿಯರಿಗೆ ಶುಭ ಹಾರೈಸುತ್ತಾರೆ. ನನ್ನ ಮಗ ಅವಿನ್‌ ನಾಮಕರಣಕ್ಕೆ ನನ್ನ ತವರು ಮನೆ ಮತ್ತು ಗಂಡನ ಮನೆಯವರು ಸೇರಿದಂತೆ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ದಂಪತಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.