ADVERTISEMENT

ಬೆಂಗಳೂರು: ಶೇ 1ರಷ್ಟು ಒಳ ಮೀಸಲಾತಿಗೆ ಅಲೆಮಾರಿಗಳ ಆಗ್ರಹ

ಸಂವಿಧಾನ ಬದ್ಧ ಸೌಲಭ್ಯ ಕಲ್ಪಿಸಲು ಒತ್ತಾಯ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 15:51 IST
Last Updated 21 ಆಗಸ್ಟ್ 2025, 15:51 IST
ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ
ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮ್ಮ ಸಮುದಾಯವನ್ನು ಪ್ರವರ್ಗ–ಎ ನಲ್ಲಿಯೇ ಇರಿಸಿ ಶೇಕಡ 1ರಷ್ಟು ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ‘ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿಗಳ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ’ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು. 

ಒಳ ಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿದ್ದ ಸರ್ಕಾರ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ದನಿ ಇಲ್ಲದ ಅಲೆಮಾರಿಗಳಂತಹ ಸಮುದಾಯಗಳ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.

ಸಮಿತಿಯ ಪದಾಧಿಕಾರಿ ಎಸ್.ಮಾರಪ್ಪ ಮಾತನಾಡಿ, ‘ಅಲೆಮಾರಿಗಳನ್ನು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜೊತೆಗೆ ಸೇರಿಸಿ ಶೇಕಡ 5ರಷ್ಟು ಮೀಸಲಾತಿ ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ. ಹಲವು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಸಮುದಾಯಗಳಿಗೆ ಸ್ವಾತಂತ್ರ್ಯ ನಂತರವೂ ಸಂವಿಧಾನ ಬದ್ಧ ಸೌಲಭ್ಯಗಳು ದೊರಕಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವರದಿಯಲ್ಲಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹವನ್ನು ಪ್ರವರ್ಗ–ಎ ನಲ್ಲಿ ವರ್ಗೀಕರಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಈ ಜಾತಿಗಳನ್ನು ಸರ್ಕಾರ ಪ್ರವರ್ಗ–ಸಿ ನಲ್ಲಿ ಸೇರಿಸಿ ಶೇಕಡ 5ರಷ್ಟು ಒಳ ಮೀಸಲಾತಿ ನೀಡಲು ಮುಂದಾಗಿರುವುದರಿಂದ ಈ ಸಮುದಾಯಗಳಿಗೆ ಮರಣ ಶಾಸನವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.

‘ಆಯೋಗದ ಶಿಫಾರಸಿನಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ– ‘ಎ’ ನಲ್ಲಿಯೇ ಇರಿಸಿ ಶೇಕಡ 1ರಷ್ಟು ಒಳ ಮೀಸಲಾತಿ ನೀಡಬೇಕು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಾಗೂ ಬಿ.ಆರ್.ಅಂಬೇಡ್ಕರ್‌ ಮತ್ತು ದಾರ್ಶನಿಕರ ಆಶಯದಂತೆ ಕಟ್ಟಕಡೆಯವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಿದಂತಾಗುತ್ತದೆ’ ಎಂದರು.

ಪ್ರತಿಭಟನೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಅಂಬಣ್ಣ ಅರೋಲಿಕರ, ಕರಿಯಪ್ಪ ಗುಡಿಮನಿ, ಮುಖಂಡರಾದ ಲೋಹಿತ್, ಮಂಜುನಾಥ್‌ ದಾಯದರ್, ಹನುಮಂತಪ್ಪ, ಆನಂದ್, ಶಾಂತರಾಜು ಪಾಲ್ಗೊಂಡಿದ್ದರು.

ಸಾಮಾಜಿಕ ನ್ಯಾಯದಡಿ ಒಳ ಮೀಸಲಾತಿ ಹಂಚಿಕೆ 

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪ್ರಮಾಣವನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಿಳಿಸಿದೆ.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳ ಮೂರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪ್ರಮಾಣವನ್ನು ಬಲಗೈ ಸಮುದಾಯಕ್ಕೆ ಶೇಕಡ 6 ಎಡಗೈ ಸಮುದಾಯಕ್ಕೆ ಶೇಕಡ 6 ಹಾಗೂ ಸ್ಪೃಶ್ಯ ಸಮುದಾಯಗಳಿಗೆ ಶೇಕಡ 5ರಷ್ಟು ಹಂಚಿಕೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.