ADVERTISEMENT

ಒಳಮೀಸಲಾತಿ: ಅಲೆಮಾರಿಗಳಿಗೆ ಅನ್ಯಾಯ ಆರೋಪ; ಅನಿರ್ದಿಷ್ಟಾವಧಿ ಹೋರಾಟ ಆರಂಭ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 15:48 IST
Last Updated 20 ಆಗಸ್ಟ್ 2025, 15:48 IST
ಅಲೆಮಾರಿಗಳನ್ನು ಪ್ರತ್ಯೇಕ ಗುಂಪು ಮಾಡಿ ಒಳಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಬೆಂಗಳೂರಿನಲ್ಲಿ ಬುಧವಾರ ಧರಣಿ ಆರಂಭಿಸಿತು
ಅಲೆಮಾರಿಗಳನ್ನು ಪ್ರತ್ಯೇಕ ಗುಂಪು ಮಾಡಿ ಒಳಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಬೆಂಗಳೂರಿನಲ್ಲಿ ಬುಧವಾರ ಧರಣಿ ಆರಂಭಿಸಿತು   

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವಾಗ ಧ್ವನಿ ಇಲ್ಲದ ಅಲೆಮಾರಿಗಳಿಗೆ ಅನ್ಯಾಯ ಮಾಡಲಾಗಿದೆ. ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ರಚಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಿಸಿದೆ.

ನ್ಯಾ. ನಾಗಮೋಹನದಾಸ್‌ ಆಯೋಗವು ಒಳಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಾಗ 59 ಅಲೆಮಾರಿ ಸಮುದಾಯಗಳನ್ನು ಒಂದು ಗುಂಪು ಮಾಡಿ ಶೇ 1 ಮೀಸಲಾತಿಯನ್ನು ಶಿಫಾರಸು ಮಾಡಿದ್ದರು. ಆದರೆ, ಸರ್ಕಾರ ವರದಿ ಜಾರಿ ಮಾಡುವಾಗ ಈ ಗುಂಪನ್ನೇ ರದ್ದು ಮಾಡಿ ಬಲಿಷ್ಠ, ಸ್ಪೃಶ್ಯ ಜಾತಿಗಳೊಂದಿಗೆ ಸೇರ್ಪಡೆ ಮಾಡಿ ಅನ್ಯಾಯ ಮಾಡಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಸಿಯಲ್ಲಿರುವ 49 ಅಲೆಮಾರಿ ಸಮುದಾಯಗಳನ್ನು ಅತಿಸೂಕ್ಷ ಸಮುದಾಯಗಳು ಎಂದು 2017–18ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವೇ ಗುರುತಿಸಿತ್ತು. ಆನಂತರ ಬಂದ ಸರ್ಕಾರವು ಈ ಅತಿಸೂಕ್ಷ್ಮ ಸಮುದಾಯಗಳಿಗೆ ಕೊರಚ ಮತ್ತು ಕೊರಮ ಸಮುದಾಯಗಳನ್ನು ಸೇರಿಸಿ ಅನ್ಯಾಯ ಮಾಡಿತ್ತು. ಒಳಮೀಸಲಾತಿ ಜಾರಿಗೆ ಬರುವಾಗ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದು ಆರೋಪಿಸಿದರು.

ADVERTISEMENT

‘ಅಲೆಮಾರಿಗಳಿಗೆ ಅನ್ಯಾಯವಾಗಿರುವ ಬಗ್ಗೆ ಮಾದಿಗ ಸಮುದಾಯ ಕನಿಷ್ಠ ಕನಿಕರವನ್ನಾದರೂ ವ್ಯಕ್ತಪಡಿಸುತ್ತಿದೆ. ಹೊಲೆಯ ಸಮುದಾಯ ಏನೂ ಮಾತನಾಡುತ್ತಿಲ್ಲ. ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದವರು ಅವರ ಜೊತೆಗೆ ಅಲೆಮಾರಿಗಳನ್ನು ಸೇರಿಸಿರುವುದಕ್ಕೆ ಖುಷಿಯಾಗಿದ್ದಾರೆ. ಭಿಕ್ಷೆ ಬೇಡಿ ಜೀವನ ನಡೆಸುವ ಅಲೆಮಾರಿ ಸಮುದಾಯಗಳು ಇವರ ಮಧ್ಯೆ ನಲುಗಿ ಹೋಗುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಲೋಕೇಶ್‌, ಸುಡುಗಾಡು ಸಿದ್ಧ ಸಮುದಾಯದ ಲೋಹಿತಾಕ್ಷ, ಶಿಳ್ಳೆಕ್ಯಾತ ಸಮುದಾಯದ ಬಿ.ಎಚ್‌. ಮಂಜುನಾಥ್‌, ಬುಡುಗ ಜಂಗಮ ಸಮುದಾಯದ ಸಣ್ಣಮಾರಪ್ಪ, ಚನ್ನದಾಸ ಸಮುದಾಯದ ಬಸವರಾಜ ನಾರಾಯಣ್ಕರ, ಕಾನೂನು ಸಲಹೆಗಾರ ವೀರೇಶ್‌ ಭಾಗವಹಿಸಿದ್ದರು.

ಈ ಸಮುದಾಯದ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಎಚ್‌. ಆಂಜನೇಯ ಅವರು ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿ ಚರ್ಚೆ ನಡೆಸಿದರು. ಮಾದಿಗ ಸಮುದಾಯದ ಅಂಬಣ್ಣ ಅರೋಲಿಕರ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.