ADVERTISEMENT

ಮತಕ್ಕೆ ಆಮಿಷ: ಕುಪೇಂದ್ರ ರೆಡ್ಡಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:03 IST
Last Updated 22 ಫೆಬ್ರುವರಿ 2024, 16:03 IST
<div class="paragraphs"><p>ಕುಪೇಂದ್ರ ರೆಡ್ಡಿ</p></div>

ಕುಪೇಂದ್ರ ರೆಡ್ಡಿ

   

ಬೆಂಗಳೂರು: ತಮ್ಮ ಪರ ಮತ ಚಲಾಯಿಸುವಂತೆ ಶಾಸಕರಿಗೆ ಹಣದ ಆಮಿಷವೊಡ್ಡಿರುವ ಆರೋಪದಡಿ ರಾಜ್ಯಸಭೆ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಹಾಗೂ ಇತರರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ದೂರು ನೀಡಿದ್ದಾರೆ. ಕುಪೇಂದ್ರ ರೆಡ್ಡಿ, 37/ಕ್ರೆಸೆಂಟ್ ಹೋಟೆಲ್ ಮಾಲೀಕ ರವಿ, ಕುಪೇಂದ್ರ ರೆಡ್ಡಿ ಭಾವ ಮಹಾಂತೇಶ್, ಹರಿಹರದ ಶಿವಶಂಕರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ದೂರಿನ ವಿವರ: ‘ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 27ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಬೇಕಾದ ನಿರ್ದಿಷ್ಟ ಸಂಖ್ಯೆಯ ಮತಗಳಿಲ್ಲ. ಹೀಗಾಗಿ, ಅವರು ಹಾಗೂ ಅವರ ಹೆಸರಿನಲ್ಲಿ ಕೆಲವರು ಮತಕ್ಕಾಗಿ ಹಣದ ಆಮಿಷವೊಡ್ಡುತ್ತಿದ್ದಾರೆ’ ಎಂದು ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ಕುಪೇಂದ್ರ ರೆಡ್ಡಿ ಅವರ ಪುತ್ರ ಹಣ ನೀಡುತ್ತಾರೆ. ಅದನ್ನು ಪಡೆದುಕೊಂಡು ಮತ ಚಲಾಯಿಸಿ. ಇಲ್ಲದಿದ್ದರೆ ಮುಂದೆ ನಿಮಗೆ ತೊಂದರೆಯಾಗುತ್ತದೆ’ ಎಂಬುದಾಗಿ ಆರೋಪಿಗಳು ಬೆದರಿಸಿದ್ದರು. ಜೊತೆಗೆ, ಹಲವರು ಕುಪೇಂದ್ರ ರೆಡ್ಡಿ ಪರವಾಗಿ ನನಗೆ ಆಮಿಷವೊಡ್ಡಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಆಮಿಷ ಬಂದಿರುವುದು ಗೊತ್ತಾಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.