ADVERTISEMENT

ನಾಮಫಲಕ: ರಾಜಕೀಯ ಒತ್ತಡದಿಂದ ಅಧಿಕಾರಿ ಅಮಾನತು ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 15:50 IST
Last Updated 24 ಫೆಬ್ರುವರಿ 2024, 15:50 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ‘ನಾಮಫಲಕಗಳಲ್ಲಿ ಇಂಗ್ಲಿಷ್‌ ಪದ ತೆಗೆದು ಹಾಕಿದ ಹಿರಿಯ ಆರೋಗ್ಯ ಪರಿವೀಕ್ಷಕ ಕೆ.ಎಲ್‌. ವಿಶ್ವನಾಥ್‌ ಅವರನ್ನು ರಾಜಕೀಯ ಒತ್ತಡದಿಂದ ಅಮಾನತು ಮಾಡಲಾಗಿದ್ದು, ಕೂಡಲೇ ಅದನ್ನು ತೆರವು ಮಾಡಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

‘ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಅನುಷ್ಠಾನದಲ್ಲಿ ಇಂಗ್ಲಿಷ್‌ ಪದಗಳ ತೆರವು ಮಾಡಿರುವ ವಿಶ್ವನಾಥ್‌ ಅವರನ್ನು ಅಮಾನತು ಮಾಡಿ ಮಹದೇವಪುರ ವಲಯ ಜಂಟಿ ಆಯುಕ್ತರು ಶುಕ್ರವಾರ ಅಮಾನತು ಮಾಡಿದ್ದರು. ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದಾರೆ. ಇಂಗ್ಲಿಷ್‌ ಪದಗಳ ತೆರವಿಗೆ ಅಮಾನತು ಮಾಡಿದರೆ ಉಳಿದ ಅಧಿಕಾರಿಗಳೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಹೇಳಿದ್ದಾರೆ.

ADVERTISEMENT

ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮನವಿ ಸಲ್ಲಿಸಿರುವ ಅಮೃತ್‌ರಾಜ್‌, ‘25–30 ಅಡಿ ಎತ್ತರವಿರುವ ಅಂಗಡಿಗಳ ನಾಮಫಲಕಗಳಲ್ಲಿನ ಇಂಗ್ಲಿಷ್‌ ಪದಗಳಿಗೆ ಬಟ್ಟೆ ಮುಚ್ಚಲು, ಬಣ್ಣ ಬಳಿಯಲು ಹೇಳಲಾಗಿದೆ. ಇದಕ್ಕಾಗಿ ಯಾವುದೇ ಸಲಕರಣೆ, ಸಾಮಗ್ರಿಗಳನ್ನು ನೀಡಿಲ್ಲ. ಮುಖ್ಯ ಆಯುಕ್ತರ ಆದೇಶವನ್ನು ಪಾಲಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಅವರಿಗೆ ಈ ರೀತಿಯ ಶಿಕ್ಷೆ ನೀಡುವುದು ಸರಿಯಲ್ಲ. ಕೂಡಲೇ ಅಮಾನತು ಆದೇಶ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಸಂಘದ ವತಿಯಿಂದ ಹೋರಾಟ ಮಾಡಲಾಗತ್ತದೆ’ ಎಂದು ತಿಳಿಸಿದ್ದಾರೆ.

ಎಲ್ಲರ ಮೇಲೂ ಕ್ರಮವಾಗಲಿ: ‘ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯ ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆಗಳಲ್ಲೂ ಜಂಟಿ ಆಯುಕ್ತರ ನೇತೃತ್ವದಲ್ಲೇ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ನಾಮಫಲಕಗಳನ್ನು ಒಡೆದು ಹಾಕಲಾಗಿತ್ತು. ಆದರೆ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾಮಫಲಕ ಒಡೆದು ಹಾಕಿರುವುದೇ ಅಪರಾಧವಾದರೆ ಎಲ್ಲ ವಲಯದಲ್ಲೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿ ಸಿಬ್ಬಂದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.