ADVERTISEMENT

ಸಂಚಾರ ದಟ್ಟಣೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸಮಸ್ಯೆ ನಿವಾರಣೆಗೆ ಪೊಲೀಸರ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 16:21 IST
Last Updated 14 ಜುಲೈ 2025, 16:21 IST
   

ಬೆಂಗಳೂರು: ಎಚ್‌ಎಎಲ್‌ ಏರ್‌ಪೋರ್ಟ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಾಯೋಗಿಕವಾಗಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದ್ದು, ಸೋಮವಾರದಿಂದಲೇ ಜಾರಿಗೆ ಬಂದಿದೆ.

ಸಂಚಾರ ನಿರ್ಬಂಧ: ಸಕ್ರಾ ಆಸ್ಪತ್ರೆ ಕಡೆಯಿಂದ ದೇವರಬೀಸನಹಳ್ಳಿ–ಇಕೋವರ್ಲ್ಡ್‌–ಇಂಟೆಲ್‌– ಇಕೊಸ್ಪೇಸ್‌ ಕಡೆಗೆ ನೇರ ಸಂಚಾರ ನಿರ್ಬಂಧಿಸಲಾಗಿದೆ.

ADVERTISEMENT

ಪರ್ಯಾಯ ಮಾರ್ಗ: ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಕಾಡಬೀಸನಹಳ್ಳಿ ಕಡೆಯ ಸರ್ವಿಸ್‌ ರಸ್ತೆಯ ಮೂಲಕ ವಾಹನಗಳು ಸಾಗಿ ಕಾಡಬೀಸನಹಳ್ಳಿಯಲ್ಲಿ ‘ಯು’ ತಿರುವು ಪಡೆದುಕೊಳ್ಳಬೇಕು. ದೇವರಬೀಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವಿಸ್‌ ರಸ್ತೆ, ಹೊರವರ್ತುಲ ರಸ್ತೆ ಮೂಲಕ ದೇವರಬೀಸನಹಳ್ಳಿ ಕಡೆಯ ಸರ್ವಿಸ್‌ ರಸ್ತೆಗೆ ಹೋಗಿ ದೇವರಬೀಸನಹಳ್ಳಿ ಜಂಕ್ಷನ್‌ ಮೂಲಕ ಸಂಚರಿಸಬಹುದು.

ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್‌ ಸರ್ವೀಸ್‌ ರಸ್ತೆಯ ಮೂಲಕ ಮಾರತ್‌ಹಳ್ಳಿ ಕಡೆ ಸಂಚರಿಸುವ ವಾಹನಗಳು ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ, ಕಾಡಬೀಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವಿಸ್‌ ರಸ್ತೆಯ ಮೂಲಕ ನೇರವಾಗಿ ಮಾರತ್‌ಹಳ್ಳಿ ಕಡೆಗೆ ಸಂಚರಿಸಬಹುದು.

ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್‌ ಸರ್ವಿಸ್ ರಸ್ತೆಯ ಮೂಲಕ ದೇವರಬೀಸನಹಳ್ಳಿ ರಸ್ತೆ ಕಡೆ ಸಂಚರಿಸುವ ವಾಹನಗಳು, ದೇವರಬೀಸನಹಳ್ಳಿ ಜಂಕ್ಷನ್‌ ಮೂಲಕ ಮಧ್ಯಭಾಗದ ಸರ್ವಿಸ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಕಾಡಬೀಸನಹಳ್ಳಿ ಸರ್ವಿಸ್‌ ರಸ್ತೆಯ ಮೂಲಕ ಕಾಡಬೀಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದುಕೊಂಡು, ದೇವರಬೀಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವಿಸ್‌ ರಸ್ತೆ, ಹೊರವರ್ತುಲ ರಸ್ತೆಯ ಮೂಲಕ ದೇವರಬೀಸನಹಳ್ಳಿ ಕಡೆಯ ಸರ್ವಿಸ್ ರಸ್ತೆಗೆ ಹೋಗಿ ದೇವರಬೀಸನಹಳ್ಳಿ ಜಂಕ್ಷನ್‌ ಮೂಲಕ ಸಂಚರಿಸಬಹುದು.

ಇಕೋವರ್ಲ್ಡ್‌ (ಆರ್‌ಎಂಝಡ್‌) ಕಡೆಯಿಂದ ಮಾರತ್‌ಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ ಪಾಸ್‌ಪೋರ್ಟ್‌ ಸರ್ವಿಸ್‌ ರಸ್ತೆಯಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಕಾಡಬೀಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವಿಸ್‌ ರಸ್ತೆಯ ಮೂಲಕ ನೇರವಾಗಿ ಮಾರತ್‌ಹಳ್ಳಿ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.