ADVERTISEMENT

ಬರಹಗಾರನಾಗಲು ಅಂಬೇಡ್ಕರ್‌ ಪ್ರೇರಣೆ: ಸಾಹಿತಿ ಮಹಾದೇವ ಶಂಕನಪುರ

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮಹಾದೇವ ಶಂಕನಪುರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:41 IST
Last Updated 19 ಫೆಬ್ರುವರಿ 2022, 20:41 IST
ಮಹಾದೇವ ಶಂಕನಪುರ
ಮಹಾದೇವ ಶಂಕನಪುರ   

ಬೆಂಗಳೂರು:‘ಸಂಶೋಧನೆ ಮತ್ತು ಅಧ್ಯಯನ ಮಾಡಲು ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಪ್ರೇರಣೆ. ಅಂಬೇಡ್ಕರ್‌ ಅವರ ಸಾಹಿತ್ಯವನ್ನು ಓದದೇ ಇದ್ದಿದ್ದರೆ ನಾನು ಬರಹಗಾರನಾಗಲು ಮತ್ತು ಇತಿಹಾಸ ಪ್ರಾಧ್ಯಾಪಕನಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಸಾಹಿತಿ ಮಹಾದೇವ ಶಂಕನಪುರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ತಮ್ಮ ಜೀವನ, ಸಾಹಿತ್ಯ ರಚನೆ, ಸಂಘಟನೆ, ಹೋರಾಟ ಮತ್ತು ಇತಿಹಾಸ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಹಂಚಿಕೊಂಡರು.

‘ಅಂಬೇಡ್ಕರ್‌ ಅವರ ಬರಹ ಮತ್ತು ಭಾಷಣಗಳನ್ನು ಎಲ್ಲರೂ ಓದಬೇಕು. ಅದರಲ್ಲೂ ಬೋಧಕ ವೃತ್ತಿಯಲ್ಲಿರುವವರು ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ಇದರಿಂದ, ಸಮಾಜದ ಬಗೆಗಿನ ದೃಷ್ಟಿಕೋನ ಬದಲಾಗುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಮೌಖಿಕ ಪರಂಪರೆಗೆ ಸಂಬಂಧಿಸಿದಂತೆ ಹೆಚ್ಚು ಕೆಲಸ ಮಾಡಿದ್ದೇನೆ. ದೇಶದ ಇತಿಹಾಸದಲ್ಲಿ ಇದುವರೆಗೆ ದಾಖಲಾಗದಿರುವ ಅಂಶಗಳು ಮತ್ತು ಕಳೆದು ಹೋಗಿರುವವರ ಬಗ್ಗೆ ಬರೆಯಬೇಕು ಎನ್ನುವ ಉದ್ದೇಶದಿಂದ ಸಂಶೋಧನೆ ಕೈಗೊಂಡಿದ್ದೇನೆ. ದಾಖಲಾಗದ ಅಂಶಗಳನ್ನು ದಾಖಲಿಸುವ ಕಾರ್ಯ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ದಲಿತ ಚಳವಳಿಗಾರರು ಮತ್ತು ಸಾಹಿತಿಗಳ ಒಡನಾಟವೂ ನನಗಿದೆ. ಅರೆಕಾಲಿಕ ಉಪನ್ಯಾಸಕನಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಲಯ ಇರಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ವಿರೇಂದ್ರ ಪಾಟೀಲ ಅವರ ಮನೆಗೆ ಬೆಳಿಗ್ಗೆ 5 ಗಂಟೆಗೆ ವಿದ್ಯಾರ್ಥಿಗಳು ಘೇರಾವ್‌ ಹಾಕಿದ್ದರು. ಈ ಹೋರಾಟದ ಬಳಿಕ ನಮ್ಮ ಕಾಲೇಜಿಗೆ ಹಾಗೂ ರಾಜ್ಯದಾದ್ಯಂತ ಹಲವು ವಿದ್ಯಾರ್ಥಿ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿತ್ತು’ ಎಂದು ವಿವರಿಸಿದರು.

‘ಪ್ರಜಾವಾಣಿ ನನಗೆ ಪ್ರೇರಣೆ ನೀಡಿದ ಮತ್ತು ನನ್ನ ಮೇಲೆ ಪ್ರಭಾವ ಬೀರಿದ ದಿನಪತ್ರಿಕೆ. ಮೂರು ಬಾರಿ ‘ಪ್ರಜಾವಾಣಿ’ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ’ ಎಂದುಇದೇ ಸಂದರ್ಭದಲ್ಲಿನೆನಪಿಸಿಕೊಂಡರು.

‘ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಂಕನಪುರ ನಮ್ಮ ಊರು. ಕೊಳ್ಳೇಗಾಲ ವ್ಯಾಪಾರ, ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಜಾನಪದ ಕ್ಷೇತ್ರಕ್ಕೆ ಚಾಮರಾಜನಗರ ಜಿಲ್ಲೆ ಅಪಾರ ಕೊಡುಗೆ ನೀಡಿದೆ’ ಎಂದು ವಿವರಿಸಿದರು.

‘ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜನಪದ ತಜ್ಞರಿಂದ ಆಸಕ್ತ ಯುವಕರಿಗೆ ಶಿಬಿರಗಳ ಮೂಲಕ ತರಬೇತಿ ನೀಡಬೇಕು ಹಾಗೂ ಸಂರಕ್ಷಿಸುವ ಕಾರ್ಯಗಳು ನಡೆಯಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನ ಅಧ್ಯಯನ ಕಡ್ಡಾಯ ಆಗಬೇಕು’

‘ಪದವಿ ಹಂತದಲ್ಲಿ ಸಂವಿಧಾನದ ಬಗ್ಗೆ ಒಂದು ವಿಷಯವನ್ನು ಅಧ್ಯಯನ ಮಾಡುವುದನ್ನು ಸರ್ಕಾರ ಅಥವಾ ವಿಶ್ವವಿದ್ಯಾಲಯಗಳು ಕಡ್ಡಾಯಗೊಳಿಸಬೇಕು. ಇಂದಿನ ಪರಿಸ್ಥಿತಿಗೂ ಇದು ಅಗತ್ಯವಾಗಿದೆ’ ಎಂದು ಮಹಾದೇವ ಶಂಕನಪುರ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.